ಭಾರತ ಚಿತ್ರರಂಗದಿಂದ ಮಿಕಾ ಸಿಂಗ್ ಬ್ಯಾನ್

ನವದೆಹಲಿ: ಪಾಕಿಸ್ತಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಗಾಯಕ ಮಿಕಾ ಸಿಂಗ್ ಅವರು ಲೈವ್ ಕಾರ್ಯಕ್ರಮ ನೀಡಿದ ವಿಡಿಯೋ ವೈರಲ್ ಆದ ಬಳಿಕ ಭಾರತ ಚಿತ್ರರಂಗದಿಂದ ಮಿಕಾ ಸಿಂಗ್ ಅವರನ್ನು ಬ್ಯಾನ್ ಮಾಡಲಾಗಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಜರಫ್ ಅವರ ಸಂಬಂಧಿಯ ಮಗಳ ಮದುವೆ ಕಾರ್ಯಕ್ರಮ ಆಗಸ್ಟ್ ಎರಡನೇ ವಾರದಲ್ಲಿ ನಡೆದಿತ್ತು. ಆಗಸ್ಟ್ 8 ರಂದು ಮಿಕಾ ಸಿಂಗ್ ಹಾಗೂ ಅವರ ತಂಡ ಸಂಗೀತ ಕಾರ್ಯಕ್ರಮ ನೀಡಿತ್ತು. ಕಾರ್ಯಕ್ರಮದಲ್ಲಿ ಬಾಲಿವುಡ್ ಹಿಟ್ ಹಾಡುಗಳನ್ನು ಹಾಡಿ ಮನರಂಜನೆ ನೀಡಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ತಿಳಿಯುತ್ತದ್ದಂತೆ ಅಖಿಲ ಭಾರತ ಸಿನಿಮಾ ಉದ್ಯೋಗಿಗಳ ಸಂಘ(ಎಐಸಿಡಬ್ಲೂಎ) ಮಿಕಾ ಸಿಂಗ್ ಅವರನ್ನು ಭಾರತೀಯ ಚಿತ್ರರಂಗದಿಂದ ಬ್ಯಾನ್ ಮಾಡಿ ಕ್ರಮ ತೆಗೆದುಕೊಂಡಿದೆ.

ಈ ಬಗ್ಗೆ ಎಐಸಿಡಬ್ಲೂಎ ಮಂಗಳವಾರ ಪ್ರಕಟಣೆ ಹೊರಡಿಸಿದೆ. ಚಲನಚಿತ್ರ ನಿರ್ಮಾಣ ಸಂಸ್ಥೆಗಳು, ಸಂಗೀತ ಕಂಪನಿಗಳು ಮತ್ತು ಆನ್‍ಲೈನ್ ಸಂಗೀತ ವಿಷಯ ಪೂರೈಕೆದಾರರೊಂದಿಗೆ ಮಿಕಾ ಸಿಂಗ್ ಅವರ ಒಡನಾಟವನ್ನು ನಿಷೇಧಿಸಲಾಗಿದೆ ಎಂದು ಆದೇಶಿಸಿದೆ. ಹಾಗೆಯೇ ಈ ಬಗ್ಗೆ ಎಐಸಿಡಬ್ಲೂಎ ಅಧ್ಯಕ್ಷ ಸುರೇಶ್ ಗುಪ್ತ ಮಾತನಾಡಿ, ಭಾರತದಲ್ಲಿ ಯಾರೂ ಕೂಡ ಮಿಕಾ ಸಿಂಗ್ ಅವರ ಜೊತೆ ಕೆಲಸ ಮಾಡುವುದಿಲ್ಲ. ಒಂದು ವೇಳೆ ಕೆಲಸ ಮಾಡಿದರೆ ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾರ್ಯಕ್ರಮ ನೀಡಿದ್ದಕ್ಕೆ ಮಿಕಾ ಸಿಂಗ್ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿದೆ. ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಸಮಯದಲ್ಲಿ ಮಿಕಾ ಸಿಂಗ್ ಅವರು ಪಾಕಿಸ್ತಾನದಲ್ಲಿ ಕಾರ್ಯಕ್ರಮ ಕೊಟ್ಟು, ಅವರಿಂದ ಹಣ ಪಡೆದಿದ್ದಾರೆ ಎಂದು ಸುರೇಶ್ ಗುಪ್ತ ಕಿಡಿಕಾರಿದ್ದಾರೆ.

ಮಿಕಾ ಸಿಂಗ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತೀಯರು ಹಾಗೂ ಪಾಕಿಸ್ತಾನಿಯರು ಗಾಯಕನ ವಿರುದ್ಧ ಸಿಡಿದೆದ್ದಿದ್ದಾರೆ. ದೇಶಭಕ್ತಿಕ್ಕಿಂತ ಮಿಕಾ ಸಿಂಗ್‍ಗೆ ಹಣವೇ ಮುಖ್ಯವಾಯ್ತ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾರತೀಯ ಚಿತ್ರಗಳನ್ನು ಹಾಗೂ ಹಾಡುಗಳನ್ನು ಪಾಕಿಸ್ತಾನ ನಿಷೇಧಿಸಿದೆ. ಆದರೂ ಈ ನಡುವೆ ಮಿಕಾ ಸಿಂಗ್ ಹಾಗೂ ಅವರ ತಂಡಕ್ಕೆ ಕರಾಚಿ, ಇಸ್ಲಾಮಾಬಾದ್ ಹಾಗೂ ಲಾಹೋರ್ ಗೆ 30 ದಿನಗಳ ವೀಸಾ ನೀಡಲಾಗಿದೆ.

Comments

Leave a Reply

Your email address will not be published. Required fields are marked *