ಡೆಲ್ಲಿ ಗೆಲುವಿನ ಓಟಕ್ಕೆ ಬ್ರೇಕ್‌; ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಮುಂಬೈ

ನವದೆಹಲಿ: ಸೋಲೇ ಇಲ್ಲ.. ಗೆಲುವೇ ಎಲ್ಲ ಎಂದು 2025ರ ಐಪಿಎಲ್‌ನಲ್ಲಿ ಮಿಂಚಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿನ ಓಟಕ್ಕೆ ಮುಂಬೈ ಇಂಡಿಯನ್ಸ್‌ ಬ್ರೇಕ್‌ ಹಾಕಿದೆ. ಇಂದು ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಪಾಂಡ್ಯ ಪಡೆ ಗೆದ್ದು ಬೀಗಿದೆ.

ದೆಹಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತು. 206 ರನ್‌ ಗುರಿ ಬೆನ್ನತ್ತಿದ ಡೆಲ್ಲಿ 19 ಓವರ್‌ಗೆ 193ಕ್ಕೆ ಆಲೌಟ್‌ ಆಗಿ ಮೊದಲ ಸೋಲೊಪ್ಪಿಕೊಂಡಿತು.

ಮುಂಬೈ ಪರ ತಿಲಕ್‌ ವರ್ಮಾ ಅರ್ಧಶತಕ ಗಳಿಸಿ (59 ರನ್‌, 33 ಬಾಲ್‌, 6 ಫೋರ್‌, 3 ಸಿಕ್ಸರ್)‌ ಗಮನ ಸೆಳೆದರು. ರಯಾನ್ ರಿಕೆಲ್ಟನ್ 41, ಸೂರ್ಯಕುಮಾರ್‌ ಯಾದವ್‌ 40, ನಮನ್ ಧೀರ್ 38 (ಔಟಾಗದೇ) ರನ್‌ ಗಳಿಸಿದರು. ರೋಹಿತ್‌ ಶರ್ಮಾ (18 ರನ್) ಎಂದಿನಂತೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ‌ಹಾರ್ದಿಕ್‌ ಪಾಂಡ್ಯ ಕೂಡ ಕೇವಲ 2 ರನ್‌ ಗಳಿಸಿ ಕೈಕೊಟ್ಟರು. ಅಂತಿಮವಾಗಿ ಮುಂಬೈ 5 ವಿಕೆಟ್‌ ಕಳೆದುಕೊಂಡು 205 ರನ್‌ ಗಳಿಸಿತು.

ಡೆಲ್ಲಿ ಪರ ವಿಪ್ರಜ್ ನಿಗಮ್, ಕುಲ್ದೀಪ್‌ ಯಾದವ್‌ ತಲಾ 2 ಹಾಗೂ ಮುಕೇಶ್‌ ಕುಮಾರ್‌ 1 ವಿಕೆಟ್‌ ಪಡೆದರು.

206 ರನ್‌ ಗುರಿ ಬೆನ್ನತ್ತಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಮೊದಲ ಎಸೆತಕ್ಕೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಶೂನ್ಯ ಸುತ್ತಿ ಔಟಾಗಿ ಹೊರ ನಡೆದಿದ್ದು, ಅಭಿಮಾನಿಗಳಲ್ಲಿ ಶಾಕ್‌ ಮೂಡಿಸಿತು. ನಂತರ ಅಭಿಷೇಕ್ ಪೊರೆಲ್ ಮತ್ತು ಕರುಣ್ ನಾಯರ್ ಜೊತೆಯಾಟ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಈ ಜೋಡಿ 61 ಬಾಲ್‌ಗೆ 119 ರನ್‌ ಗಳಿಸಿ ಉತ್ತಮ ಪ್ರದರ್ಶನ ನೀಡಿತು.

ತಂಡದ ಮೊತ್ತ 119 ಇದ್ದಾಗ ಪೊರೆಲ್‌ (33) ಔಟಾಗಿ ಹೊರ ನಡೆದರು. ಈ ಮಧ್ಯೆ ಕರುಣ್‌ ನಾಯರ್‌ ಏಕಾಂಗಿ ಹೋರಾಟ ನಡೆಸಿದರು. 40 ಬಾಲ್‌ಗೆ 12 ಫೋರ್‌, 5 ಸಿಕ್ಸರ್‌ನೊಂದಿಗೆ 89 ರನ್‌ ಸಿಡಿಸಿ ಮಿಂಚಿದರು. ಈ ಮಧ್ಯೆ ಮಿಚೆಲ್‌ ಸ್ಯಾಂಟ್ನರ್‌ಗೆ ಕ್ಲೀನ್‌ ಬೌಲ್ಡ್‌ ಆಗಿ ಹೊರ ನಡೆದರು. ಫಿನಿಷರ್‌ ಕೆ.ಎಲ್‌.ರಾಹುಲ್‌ ಕೂಡ ಕೇವಲ 15 ರನ್‌ಗೆ ಔಟಾಗಿದ್ದು, ಡೆಲ್ಲಿ ಫ್ಯಾನ್ಸ್‌ಗೆ ಮತ್ತಷ್ಟು ಶಾಕ್‌ ನೀಡಿತು.

ಇದಾದ ಮೇಲೆ ಯಾವೊಬ್ಬ ಬ್ಯಾಟರ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸಾಲು ಸಾಲು ರನ್‌ ಔಟ್‌ಗಳು ಡೆಲ್ಲಿ ತಂಡಕ್ಕೆ ಸೋಲಿನ ಹಾದಿ ತೋರಿಸಿತು. ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಪಡೆ ಗಮನ ಸೆಳೆಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ ಗೆಲ್ಲಬಹುದಿದ್ದ ಮ್ಯಾಚ್‌ನ್ನು ಡೆಲ್ಲಿ ಕೈಚೆಲ್ಲಿತು. ಕೊನೆಗೆ 193ಕ್ಕೆ ಡೆಲ್ಲಿ ಆಲೌಟ್‌ ಆಯಿತು.

ಮುಂಬೈ ಪರ ಕರಣ್ ಶರ್ಮಾ 3 ವಿಕೆಟ್‌ ಕಿತ್ತು ಮಿಂಚಿದರು. ಮಿಚೆಲ್ ಸ್ಯಾಂಟ್ನರ್ 2, ದೀಪಕ್ ಚಹಾರ್, ಜಸ್ಪ್ರಿತ್‌ ಬುಮ್ರಾ ತಲಾ 1 ವಿಕೆಟ್‌ ಪಡೆದರು.