ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ: ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ತೀವ್ರಗತಿಯಲ್ಲಿ ಅಭಿವೃದ್ದಿ ಹೊಂದುತ್ತಿದ್ದು, ಮುಂದಿನ ದಿನಗಳಲ್ಲಿ ಉಪನಗರವಾಗಿ ಚಿಕ್ಕಬಳ್ಳಾಪುರ ಬೆಳೆಯಿಲಿದೆ. ಹೀಗಾಗಿ ಜಿಲ್ಲಾ ಕೇಂದ್ರಕ್ಕೆ ಮೆಟ್ರೋ ರೈಲು ವಿಸ್ತರಣೆ ಮಾಡುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.

ಮತದಾನಕ್ಕೆ ಕೆಲ ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ವೀರಪ್ಪ ಮೊಯ್ಲಿ ಅವರು ಬಿಡುವಿಲ್ಲದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ವೀರಪ್ಪಮೊಯ್ಲಿ ಅವರು, ಎರಡು ಬಾರಿ ಚಿಕ್ಕಬಳ್ಳಾಪುರದ ಜನ ನನ್ನ ಕೈ ಹಿಡಿದಿದ್ದಾರೆ. ಮುಂದಿನ 5 ವರ್ಷಗಳಲ್ಲಿ ನಾನು ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ ಮಾಡುವುದಾಗಿ ಆಶ್ವಾಸನೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಮತ್ತೊಂದೆಡೆ ಕೃಷ್ಣಾ ನದಿಯ ನೀರನ್ನ ಸಹ ಬಾಗೇಪಲ್ಲಿ ಭಾಗದಿಂದ ಈ ಕ್ಷೇತ್ರಕ್ಕೆ ತರುವುದಾಗಿ ತಿಳಿಸಿದರು. ಅಲ್ಲದೇ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗದಲ್ಲಿ ಕೈಗಾರಿಕಾ ವಲಯ ಗುರುತಿಸಿ, ಈಗಾಗಲೇ ಬಜೆಟ್ ನಲ್ಲಿ ಘೋಷಣೆಯಾಗಿರುವ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕ ಆರಂಭಿಸುವುದಾಗಿ ಪ್ರಚಾರ ಭಾಷಣದಲ್ಲಿ ಹೇಳಿದರು.

ಮನೆ ಮನೆಗೆ ಕುಡಿಯುವ ನೀರು, ಹೊಲ ಹೊಲಕ್ಕೆ ಜಲ, ಮನೆ ಮನೆಗೆ ಯುವಕರಿಗೆ ಉದ್ಯೋಗ ನೀಡುವುದೇ ತಮ್ಮ ಸಂಕಲ್ಪ ಎಂದು ವೀರಪ್ಪ ಮೊಯ್ಲಿ ಘೋಷಣೆ ಮಾಡಿದರು. ಇದೆಲ್ಲದರ ನಡುವೆ ಚರ್ಚ್‍ಗಳಿಗೆ ಭೇಟಿ ನೀಡಿದ ವೀರಪ್ಪ ಮೊಯ್ಲಿ ಪ್ರಾರ್ಥನೆ ಸಲ್ಲಿಸಿ, ಮತಯಾಚನೆ ಮಾಡಿದರು.

Comments

Leave a Reply

Your email address will not be published. Required fields are marked *