ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

ಮ್ಯಾಡ್ರಿಡ್: ತೆರಿಗೆ ವಂಚನೆ ಪ್ರಕರಣದಲ್ಲಿ ಖ್ಯಾತ ಫುಟ್ಪಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಮೇಲ್ಮನವಿ ಅರ್ಜಿಯನ್ನು ಸ್ಪೇನ್ ಸುಪ್ರೀಂ ಕೋರ್ಟ್ ವಜಾಗೊಳಿಸಿ, ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.

ತೆರಿಗೆ ವಂಚನೆ ಪ್ರಕರಣದ ಸಂಬಂಧ ಅರ್ಜೆಂಟೀನಾದ ಆಟಗಾರ ಮೆಸ್ಸಿ ಹಾಗೂ ತಂಜೆ ಜಾರ್ಜ್ ಅವರಿಗೆ ಸ್ಥಳೀಯ ನ್ಯಾಯಾಲಯ 2016ರ ಜುಲೈ ನಲ್ಲಿ  21 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೆಸ್ಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮೆಸ್ಸಿ ಮತ್ತು ಜಾರ್ಜ್ 4.1 ಮಿಲಿಯನ್ ಯುರೋ(ಅಂದಾಜು 29.70 ಕೋಟಿ ರೂ) ಅಧಿಕ ಮೊತ್ತದ ತೆರಿಗೆಯನ್ನು ಸ್ಪೇನಿನಲ್ಲಿ ಬಾಕಿ ಉಳಿಸಿಕೊಂಡಿದ್ದ ಪ್ರಕರಣದಲ್ಲಿ ಈಗ ಶಿಕ್ಷೆಯಾಗಿದೆ.

ಜೈಲಿಗೆ ಹೋಗಬೇಕಿಲ್ಲ: ದಂಡ ಪಾವತಿಸುವ ಮೂಲಕ ಇವರಿಬ್ಬರಿಗೂ ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳುವ ಅವಕಾಶವಿದೆ. 2 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಯ ಆದೇಶಕ್ಕೆ ಸ್ಪೇನ್ ದೇಶದಲ್ಲಿ ಈ ವಿಶೇಷ ಸೌಲಭ್ಯವಿದೆ. ಕೋರ್ಟ್ ಆದೇಶದಂತೆ ಮೆಸ್ಸಿ ಅವರು 2 ಮಿಲಿಯನ್ ಯುರೋ(ಅಂದಾಜು 14.48 ಕೋಟಿ ರೂ.), ತಂದೆ 1.5 ಮಿಲಿಯನ್ ಯುರೋ(ಅಂದಾಜು 10.80 ಕೋಟಿ ರೂ.) ಪಾವತಿಸಿ ಜೈಲು ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದಾಗಿದೆ.

4.1 ಮಿಲಿಯನ್ ಯುರೋವನ್ನು 2007 ರಿಂದ 2009ರ ಅವಧಿಯಲ್ಲಿ ಮೆಸ್ಸಿ ಹಾಗೂ ಅವರ ತಂದೆಯವರು ಬೆಲಿಜ್ ಮತ್ತು ಉರುಗ್ವೆಯಲ್ಲಿ ಅಡಗಿಸಿಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಅಂದು ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಮೆಸ್ಸಿ, ನನಗೆ ಆರ್ಥಿಕ ವ್ಯವಹಾರಗಳು ತಿಳಿದಿಲ್ಲ, ಫುಟ್ಬಾಲ್ ಆಟ ಅಷ್ಟೆ ತಿಳಿದಿದೆ ಎಂದು ಪ್ರತಿಕ್ರಿಯಿಸಿದ್ದರು.

Comments

Leave a Reply

Your email address will not be published. Required fields are marked *