ಬೆಳಗಾವಿ: ಸರ್ಕಾರಿ ದಾಖಲಾತಿ ಪತ್ರವನ್ನು ಮರಾಠಿ ಭಾಷೆಯಲ್ಲಿ ನೀಡಬೇಕೆಂದು ಒತ್ತಾಯಿಸಿ ಎಂಇಎಸ್ ಕಾರ್ಯಕರ್ತರು ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಕರ್ನಾಟಕ ಸರ್ಕಾರಕ್ಕೆ ನಾಲಾಯಕ್ ಸರ್ಕಾರ ಎಂದು ಘೋಷಣೆ ಕೂಗಿ ಪುಂಡಾಟ ಮೆರೆದಿದ್ದಾರೆ.

ನಗರದ ಸರ್ದಾರ್ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟ ಪ್ರದರ್ಶಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಎಂಇಎಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ಪ್ರತಿಭಟನೆಯ ಮೆರವಣಿಗೆಯುದ್ದಕ್ಕೂ ಎಂಇಎಸ್ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿದರು. ಮೆರವಣಿಗೆ ಆರಂಭಕ್ಕೂ ಮುನ್ನ ಪೊಲೀಸರ ಜೊತೆಗೂ ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಇಎಸ್ ಮುಖಂಡ ಮನೋಹರ ಕಿಣೇಕರ್, ಬೆಳಗಾವಿಯಲ್ಲಿ ಮರಾಠಿಗರ ಸಂಖ್ಯೆ ಅಧಿಕವಾಗಿರುವಾಗ ಕರ್ನಾಟಕ ಸರ್ಕಾರ ಸ್ಥಳೀಯ ಭಾಷೆಗೆ ಆದ್ಯತೆ ಕೊಡುವ ಅಗತ್ಯವಿದೆ. ಆದ್ದರಿಂದ ಸರ್ಕಾರದ ದಾಖಲಾತಿಯ ಕಾಗದ ಪತ್ರಗಳನ್ನು ಮರಾಠಿ ಭಾಷೆಯಲ್ಲಿ ನೀಡಬೇಕು. ನಗರದ ಪ್ರಮುಖ ವೃತ್ತದಗಳಲ್ಲಿ ಮರಾಠಿ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕೆಂದು ಆಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಸರ್ಕಾರ ಬಹುತೇಕ ಪತನ – ಸುಪ್ರೀಂ ಕೋರ್ಟ್‍ನಲ್ಲಿ ಬಹುಮತ ಕಳೆದುಕೊಂಡಿದೆ ಎಂದ ಬಂಡಾಯ ಶಾಸಕರು
ಕರ್ನಾಟಕ ಸರ್ಕಾರ ನಿರಂತರವಾಗಿ ಮರಾಠಿಗರ ಮೇಲೆ ಅನ್ಯಾಯ ಮಾಡುತ್ತಾ ಬಂದಿದೆ. ಇಲ್ಲಿನ ಮರಾಠಿ ಭಾಷಿಕರ ಬೇಡಿಕೆಯನ್ನು ಈಡೇರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಮರಾಠಿಯಲ್ಲಿ ಸರ್ಕಾರಿ ದಾಖಲೆಯ ಕಾಗದ ಪತ್ರ ನೀಡುವಂತೆ ಹಲವಾರು ಬಾರಿ ಹೋರಾಟ ನಡೆಸಿದರೂ ಇಲ್ಲಿಯವರೆಗೆ ಸ್ಪಂದನೆ ನೀಡಿಲ್ಲ. ಕೂಡಲೇ ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ಇದೇ ವೇಳೆ ಎಂಇಎಸ್ ಪುಂಡರು ಬೆಳಗಾವಿ, ನಿಪ್ಪಾಣಿ, ಕಾರವಾರ, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕೆಂದು ನಾಡದ್ರೋಹಿಗಳು ಘೋಷಣೆ ಕೂಗಿದ್ದಾರೆ.

Leave a Reply