ಬೆಂಗಳೂರನ್ನು ಟೀಕಿಸಿದವರಿಗೆ ಮರ್ಸಿಡಿಸ್ ಬೆಂಜ್ ಸಿಇಒ ಮೆಚ್ಚುಗೆಯ ವಿಡಿಯೋ ಅಪ್ಲೋಡ್‌ ಮಾಡಿ ತಿವಿದ ಡಿಕೆಶಿ

ಬೆಂಗಳೂರು: ಟ್ರಾಫಿಕ್ ಕಿರಿಕಿರಿ, ರಸ್ತೆ ಗುಂಡಿಗಳ ಬಗ್ಗೆ ನಿರಂತರವಾಗಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಮಾಡಿ ಉದ್ಯಮಿಗಳು ಸರ್ಕಾರವನ್ನು ತಿವಿಯುತ್ತಿದ್ದರು. ಈ ಮಧ್ಯೆ ಮರ್ಸಿಡಿಸ್ ಬೆಂಜ್ ಸಿಇಒ ಒಲಾ ಕ್ಯಾಲೆನಿಯಸ್ ಬೆಂಗಳೂರನ್ನು (Bengaluru) ಹಾಡಿಹೊಗಳಿದ್ದರು. ಒಲಾ ಕ್ಯಾಲೆನಿಯಸ್ (Mercedes-Benz CEO Ola Kallenius) ವಿಡಿಯೋ ತುಣುಕನ್ನು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಪೋಸ್ಟ್‌ ಮಾಡಿ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಒಲಾ ಕ್ಯಾಲೆನಿಯಸ್ ಹೇಳಿದ್ದೇನು?
ನೀವು ಜಗತ್ತಿನೆಲ್ಲೆಡೆ ಹೊಸ ಪ್ರತಿಭೆಗಳನ್ನು ಸ್ವಾಗತಿಸಬೇಕು. ನಾನು ಬೆಂಗಳೂರಿಗೆ ಹೋದಾಗೆಲ್ಲಾ, ಎರಡು ಪಟ್ಟು ಉತ್ಸಾಹದೊಂದಿಗೆ ಮರಳಿ ಬರುತ್ತೇನೆ. ಈ ನಗರದಲ್ಲಿರುವ ಸಾಫ್ಟ್‌ವೇರ್‌ ಪ್ರತಿಭಾ ಸಮೂಹವು ಬಹಳ ಅದ್ಭುತವಾಗಿದೆ.

ಬೆಂಗಳೂರಿನಲ್ಲಿ ಬಹಳ ಚೆನ್ನಾಗಿ ಜರ್ಮನ್ ಭಾಷೆ ಮಾತನಾಡುವವರನ್ನು ಕಂಡಿದ್ದೇನೆ. ಅಂಥವರು ಸಿಕ್ಕಾಗ, ತಾವು ಜರ್ಮನಿಯಲ್ಲಿ ಎಲ್ಲಿ ಓದಿದ್ದು ಅಂತ ಕೇಳುತ್ತೇನೆ. ಆದರೆ ಅವರು ತಾನು ಜರ್ಮನಿಗೆ ಯಾವತ್ತೂ ಹೋಗಿಯೇ ಇಲ್ಲ ಎನ್ನುತ್ತಾರೆ. ನನಗೆ ಇಂಥ ಸ್ಫೂರ್ತಿಗಳೇ ಬೇಕು. ಇಂಥ ಪ್ರತಿಭೆಗಳು ಇರುವ ಕಡೆ ನಾವು ಹೋಗುತ್ತೇವೆ ಎಂದು ಒಲಾ ಕ್ಯಾಲೆನಿಯಸ್ ಹೇಳಿದ್ದಾರೆ.

ಡಿಕೆಶಿ ಹೇಳಿದ್ದೇನು?
ಬೆಂಗಳೂರಿನ ಅಸಾಧಾರಣ ಪ್ರತಿಭೆಯ ಬಗ್ಗೆ ಮರ್ಸಿಡಿಸ್-ಬೆನ್ಜ್ ಸಿಇಒ ಓಲಾ ಕಾಲೆನಿಯಸ್ ಅವರ ಮಾತುಗಳು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ನಗರದ ಬೆಳೆಯುತ್ತಿರುವ ನಿಲುವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿಗೆ ಪ್ರತಿ ಭೇಟಿಯು ಅವರ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ ಎಂಬ ಅವರ ಮೆಚ್ಚುಗೆಯು ನಮ್ಮ ಜನರ ಪ್ರತಿಭೆಗೆ ಹೆಮ್ಮೆಯ ಮನ್ನಣೆಯಾಗಿದೆ

ಬೆಂಗಳೂರಿನ ಸೃಜನಶೀಲತೆ, ಪ್ರತಿಭೆ ಮತ್ತು ನಾವೀನ್ಯತೆಯ ಮನೋಭಾವವು ವಿಶ್ವದ ಅತ್ಯುತ್ತಮರಿಗೆ ಸ್ಫೂರ್ತಿ ನೀಡುತ್ತಲೇ ಇದೆ. ಜಾಗತಿಕ ವೇದಿಕೆಯಲ್ಲಿ ಬೆಂಗಳೂರು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡಲು ನಾವು ಶ್ರಮಿಸುತ್ತೇವೆ.