ಇಲ್ಲಿ ಮೇಕೆದಾಟು ಜಪ, ತಮಿಳುನಾಡಿನಲ್ಲಿ ಡಿಎಂಕೆ ಜತೆ ಕಾಂಗ್ರೆಸ್‌ ದೋಸ್ತಿ: ಹೆಚ್‌ಡಿಕೆ

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಮೂಲಕ ಆ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತದೆ ಎಂದು ಕಾಂಗ್ರೆಸ್ಸಿಗರು ನನಗೆ ಗ್ಯಾರಂಟಿ ಕೊಟ್ಟರೆ, ನಾನು ಎಲ್ಲರಿಗಿಂತ ಮೊದಲೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ʼಜನತಾ ಜಲಧಾರೆʼ ಕಾರ್ಯಕ್ರಮದಲ್ಲಿ ರಾಜ್ಯವ್ಯಾಪಿ ಜಲ ಸಂಗ್ರಹಕ್ಕೆ ತೆರಳಲಿರುವ ʼಗಂಗಾ ರಥಯಾತ್ರೆʼಗೆ ಸಿದ್ಧಪಡಿಸಲಾಗಿದ್ದ ವಾಹನ ಅನಾವರಣಗೊಳಿಸಿದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಇದನ್ನೂ ಓದಿ: ವೈರಿ ದೇಶವನ್ನು ಪಕ್ಕದಲ್ಲೇ ಇರಿಸಿಕೊಂಡು ಪ್ರಧಾನಿಗೆ ದಿಗ್ಬಂಧನ: ಪೇಜಾವರಶ್ರೀ ಕಳವಳ

ಕಾಂಗ್ರೆಸ್‌ ಪಕ್ಷದ್ದು ಪಾದಯಾತ್ರೆ ಅಲ್ಲ, ಅದು ಮತಯಾತ್ರೆ ಮಾತ್ರ. ಕೇವಲ ಮುಂದಿನ ಚುನಾವಣೆಯಲ್ಲಿ ಮತ ಪಡೆಯುವ ಏಕೈಕ ಉದ್ದೇಶದಿಂದ ಆ ಪಕ್ಷ ಜನರಿಗೆ ಪಾದಯಾತ್ರೆ ಹೆಸರಿನಲ್ಲಿ ಮಂಕುಬೂದಿ ಎರಚುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಆ ಪಕ್ಷದ ಪ್ರತಿಪಕ್ಷ ನಾಯಕರು ಮೇಕೆದಾಟು ಯೋಜನೆ ಬಗ್ಗೆ ದಿನಕ್ಕೆ ಒಂದೊಂದು ಹಸಿಸುಳ್ಳು ಹೇಳುತ್ತಿದ್ದಾರೆ. ಆ ಪಕ್ಷದ ರಾಜ್ಯಾಧ್ಯಕ್ಷರು ಪ್ರಾಣ ಹೋದರೂ ಪಾದಯಾತ್ರೆ ನಿಲ್ಲಲ್ಲ ಅಂತಾರೆ. ಪಾಪ.. ನಿಮ್ಮ ಪ್ರಾಣ ಯಾಕೆ ವ್ಯರ್ಥ ಮಾಡಿಕೊಳ್ತೀರಾ? ನೀವು ಕಾವೇರಿ ಕೊಳ್ಳದ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡಿಕೊಂಡು ಅವರ ಜೀವ ತೆಗೆಯಲು ಹೊರಟಿದ್ದಾರಾ? ಅಂಥ ಕೆಲಸ ಬೇಡ ಎಂದು ಕಾಂಗ್ರೆಸ್‌ ನಾಯಕರಿಗೆ ಚಾಟಿ ಬೀಸಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್

ಇಲ್ಲಿ ಮೇಕೆದಾಟು, ತಮಿಳುನಾಡಿನಲ್ಲಿ ಡಿಎಂಕೆ ಸಖ್ಯ!
ಕರ್ನಾಟಕದಲ್ಲಿ ಕಾಂಗ್ರೆಸ್‌ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡುತ್ತಿದೆ. ಆದರೆ ಪಕ್ಕದ ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆಯನ್ನು ವಿರೋಧ ಮಾಡುತ್ತಿರುವ ಡಿಎಂಕೆ ಪಕ್ಷದ ಮಿತ್ರಪಕ್ಷವಾಗಿದೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ರಾಜ್ಯಪಾಲರಿಂದ ಭಾಷಣ ಮಾಡಿಸಿರುವ ಸ್ಟಾಲಿನ್‌ ಸರ್ಕಾರದ ಜೊತೆ ಕಾಂಗ್ರೆಸ್‌ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬಹದಲ್ಲ? ಅದನ್ನು ಬಿಟ್ಟು ಪಾದಯಾತ್ರೆ ಮೂಲಕ ನಾಟಕ ಮಾಡುವುದು ಏಕೆ ಎಂದು ಪ್ರಶ್ನಿಸಿದರು.

ದೇವೇಗೌಡರ ಮೇಲೆ ನಂಬಿಕೆ ಇದ್ದರೆ ಪಾದಯಾತ್ರೆ ಯಾಕೆ?
ದೇವೇಗೌಡರು ಮಾಡಿದ ಪ್ರಯತ್ನದ ಫಲವಾಗಿ ಇಂದು ಬೆಂಗಳೂರು ಜನರಿಗೆ ಕಾವೇರಿ ನಾಲ್ಕನೇ ಹಂತದಲ್ಲಿ 9 ಟಿಎಂಸಿ ನೀರು ಸಿಕ್ಕಿದೆ. ದೇವೇಗೌಡರು ಪ್ರಧಾನಿಗಳ ಜೊತೆ ವಿಶ್ವಾಸ ಇಟ್ಟುಕೊಂಡಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಷ್ಟು ನಂಬಿಕೆ ಇದ್ದ ಮೇಲೆ ದೇವೇಗೌಡರನ್ನೇ ಪ್ರಧಾನಿ ಜೊತೆ ಮಾತನಾಡಿ ಎಂದು ಕಾಂಗ್ರೆಸ್‌ ನಾಯಕರು ಹೇಳಬಹುದಲ್ಲವೆ? ಹಾಗಿದ್ದ ಮೇಲೆ ಪಾದಯಾತ್ರೆ ಏತಕ್ಕೆ ಎಂದು ಕೇಳಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ನಿಮ್ಮ ಗಂಡಸ್ತನ ಎಲ್ಲಿ ಹೋಗಿತ್ತು: ರೇಣುಕಾಚಾರ್ಯ

ಕರ್ನಾಟಕದ ನೀರಿನ ವಿಚಾರದಲ್ಲಿ ದೇವೇಗೌಡರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ 1962ರಲ್ಲಿ ಪಕ್ಷೇತರ ಶಾಸಕರಾಗಿ ಗೆದ್ದು ಶಾಸನಸಭೆಗೆ ಬಂದ ಅವರು ನಡೆಸಿದ ಹೋರಾಟದ ಫಲವೇ ಹಾರಂಗಿ, ಕಬಿನಿ, ಹೇಮಾವತಿ ಯೋಜನೆಗಳು. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾನೂನಾತ್ಮಕ, ಆಡಳಿತ ಹಾಗೂ ತಾಂತ್ರಿಕವಾಗಿ ಅಪಾರ ಜ್ಞಾನವುಳ್ಳ ದೇವೇಗೌಡರು ಮಾಡಿರುವ ಕೆಲಸಗಳ ಬಗ್ಗೆ ಸಿದ್ದರಾಮಯ್ಯ ಅವರಿಗೇನು ಗೊತ್ತು? ಒಂದು ವೇಳೆ ನೀರಾವರಿ ವಿಷಯಗಳಲ್ಲಿ ದೇವೇಗೌಡರನ್ನು ಕಡೆಗಣಿಸಿದರೆ ರಾಜ್ಯಕ್ಕೇ ನಷ್ಟ ಎಂದು ಸ್ಪಷ್ಟವಾಗಿ ಹೇಳಿದರು.

ಮಾತೆತ್ತಿದರೆ ಕುಮಾರಣ್ಣ, ನಮ್ಮಣ್ಣ ಅನ್ನುತ್ತಾರೆ. ಅವರು ಹೊಡೆದರೆ ಹೊಡೆಸಿಕೊಳ್ತೀನಿ ಎನ್ನುತ್ತಾರೆ. ಅಶೋಕಣ್ಣ, ಅಶ್ವತ್ಥನಾರಾಯಣ ಅಣ್ಣ ಅಂತ ಮಾತನಾಡುತ್ತಾರೆ. ನೀರಾವರಿ ವಿಷಯದಲ್ಲಿ ಇಂಥ ಡ್ರಾಮಾ ಎಲ್ಲಾ ಯಾಕೆ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.

Comments

Leave a Reply

Your email address will not be published. Required fields are marked *