ಮೇಕೆದಾಟು ಪಾದಯಾತ್ರೆ ಇಂದು ಕ್ಲೈಮ್ಯಾಕ್ಸ್:‌ ಕಾಂಗ್ರೆಸ್‌ ಪ್ಲ್ಯಾನ್‌ ಏನು?

ಬೆಂಗಳೂರು/ರಾಮನಗರ: ಸರ್ಕಾರ ವರ್ಸಸ್ ಕಾಂಗ್ರೆಸ್ ನಡುವಿನ ಮೇಕೆದಾಟು ಪಾದಯಾತ್ರೆ ಈಗ ನಿರ್ಣಾಯಕ ಹಂತವನ್ನು ತಲುಪಿದೆ. ಬೆಂಗಳೂರಿನಲ್ಲೇ ಪಾದಯಾತ್ರೆಯನ್ನು ಅಂತ್ಯಗೊಳಿಸುತ್ತೇವೆ ಎಂದು ಹಠ ತೊಟ್ಟಿದ್ದ ಕಾಂಗ್ರೆಸ್‌ ಈಗ ಧರ್ಮಸಂಕಟಕ್ಕೆ ಸಿಲುಕಿದೆ.

ಹೈಕೋರ್ಟ್‌ ಚಾಟಿ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಪಾದಯಾತ್ರೆಯನ್ನು ನಿಷೇಧಿಸಿ ಆದೇಶ ಪ್ರಕಟಿಸಿದೆ. ಆದರೆ ಪಾದಯಾತ್ರೆಯನ್ನು ನಾವು ನಿಲ್ಲಿಸಲ್ಲ ಎಂದು ಕಾಂಗ್ರೆಸ್‌ ನಾಯಕರು ಈಗಾಗಲೇ ಹೇಳಿದ್ದಾರೆ. ಬುಧವಾರ ರಾತ್ರಿ ರಾಮನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್‌ ಗುರುವಾರ ಬೆಳಗ್ಗೆ ಎಂದಿನಂತೆ ಪಾದಯಾತ್ರೆ ಮುಂದುವರಿಯಲಿದೆ ಎಂದು ಪ್ರಕಟಿಸಿದ್ದಾರೆ.  ಇದನ್ನೂ ಓದಿ: ಸರ್ಕಾರ ಯಾವುದೇ ಆದೇಶ ನೀಡಲಿ ಪಾದಯಾತ್ರೆ ನಿಲ್ಲಲ್ಲ: ಡಿ.ಕೆ ಸುರೇಶ್

ಕಾಂಗ್ರೆಸ್‌ ಪ್ಲಾನ್‌ ಏನು?
ಪ್ರತಿಭಟನೆ ಮುಂದುವರಿಸಬೇಕೇ? ಬೇಡವೇ ಎಂಬುದರ ಬಗ್ಗೆ ಕಾಂಗ್ರೆಸ್‌ನಲ್ಲೇ ಗೊಂದಲ ಇದೆ. ಕೆಲ ನಾಯಕರು ಕೋವಿಡ್‌ ಇರುವ ಕಾರಣ ಸ್ಥಗಿತ ಮಾಡುವುದು ಉತ್ತಮ ಎಂದು ಸಲಹೆ ನೀಡಿದರೆ ಕೆಲ ನಾಯಕರು ಮುಂದುವರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

ಡಿಕೆ ಶಿವಕುಮಾರ್‌ ಈ ಪಾದಯಾತ್ರೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಪ್ರತಿಭಟನೆಯಿಂದ ಹಿಂದಕ್ಕೆ ಸರಿದರೆ ಹಿನ್ನಡೆಯಾಗುತ್ತದೆ. ಹೀಗಾಗಿ ಮುಂದುವರಿಸೋಣ ಎಂದಿದ್ದಾರೆ. ಹೈಕೋರ್ಟ್‌ ಆದೇಶದ ಬಳಿಕ ಕಾಂಗ್ರೆಸ್‌ ನಾಯಕರು ಹಿರಿಯ ವಕೀಲರ ಸಲಹೆಯನ್ನು ಪಡೆದಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿದ್ದ ಡಿಕೆ ಶಿವಕುಮಾರ್‌ ತಡರಾತ್ರಿ ರಾಮನಗರಕ್ಕೆ ತೆರಳಿದ್ದಾರೆ.

ಒಂದು ವೇಳೆ ಬಂಧನ ಮಾಡಿದರೆ ಕರ್ನಾಟಕದ ನೀರಿಗಾಗಿ ನಡೆದ ಹೋರಾಟವನ್ನು ಸರ್ಕಾರ ತಡೆದಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯವ್ಯಾಪಿ ಪ್ರತಿಭಟನೆ ಮಾಡುವ ಸಾಧ್ಯತೆಯಿದೆ.

ರೈತರ ಹೋರಾಟದ ವಿಚಾರದಲ್ಲಿ ಪ್ರತಿಭಟಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ ಈ ವಿಚಾರವನ್ನು ಕೋರ್ಟ್‌ನಲ್ಲಿ ಪ್ರಸ್ತಾಪ ಮಾಡಿ ಪ್ರತಿಭಟನೆಯನ್ನು ಮುಂದುವರಿಸುವುದು ಉತ್ತಮ ಎಂಬ ನಿರ್ಧಾರಕ್ಕೆ ಕೆಲ ನಾಯಕರು ಬಂದಿದ್ದಾರೆ.

 

Comments

Leave a Reply

Your email address will not be published. Required fields are marked *