ನೀವು ಇರಬೇಕು ಎನ್ನುವುದು ನನ್ನ ಆಸೆ: ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

ಶಿವಮೊಗ್ಗ: ಕೋವಿಡ್ ಹೆಚ್ಚಳವಾಗುತ್ತಿರುವುದರಿಂದ ನಿಮ್ಮ ಹೋರಾಟವನ್ನು ಮುಂದಕ್ಕೆ ಹಾಕಿ. ನೀವು ಇನ್ನೂ ಇರಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದು ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡಿಕೆಶಿ ಹಾಗೂ ಸಿದ್ದರಾಮಯ್ಯ ನಾವು ಇಬ್ಬರೇ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನೀವು ಇಬ್ಬರೇ ಹೋಗಿ ಏಕೆ ಸಾಯುತ್ತೀರಿ. ನೀವು ಇಬ್ಬರೇ ಹೋಗುತ್ತೇವೆ ಅಂದರೂ ನಿಮ್ಮ ಕಾರ್ಯಕರ್ತರು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಸೇರಿದಂತೆ ಅಸೆಂಬ್ಲಿ ಚುನಾವಣೆ ಸಹ ಬರುತ್ತಿದೆ. ಹೀಗಾಗಿ ಕಾರ್ಯಕರ್ತರು ನಿಮ್ಮ ಎದುರು ಶೋ ಮಾಡಲು ತುಂಬಾ ಜನ ಬರುತ್ತಾರೆ. ಸುಮ್ಮ ಸುಮ್ಮನೆ ಅವರನ್ನು ಸಾಯಿಸಿ, ನೀವು ಏಕೆ ಸಾಯುತ್ತೀರಾ. ನಾವು ನೀವು ಒಟ್ಟಿಗೆ ಸಂತೋಷವಾಗಿ ಜೀವನ ಮಾಡೋಣ. ರಾಜಕಾರಣ ಮಾಡುವ ಸಲುವಾಗಿ ಪಾದಯಾತ್ರೆ ಮಾಡಲೇಬೇಕು ಎಂದು ಹಠ ಹಿಡಿದರೆ ನನ್ನ ಅಭ್ಯಂತರ ಏನು ಇಲ್ಲ ಎಂದರು.

ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಹೋರಾಟ ಮಾಡುವ ಅವಕಾಶ ಇದೆ. ಆದರೆ ರಾಜಕಾರಣಕೋಸ್ಕರ ಕಾಂಗ್ರೆಸ್ ನವರು ಹೋರಾಟವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಜನ ಯೋಚನೆ ಮಾಡುತ್ತಿದ್ದಾರೆ. ನೀವು ಅಧಿಕಾರದಲ್ಲಿ ಇದ್ದಾಗ ಕೃಷ್ಣ, ಕಾವೇರಿ, ಮೇಕೆದಾಟು ಏಕೆ ಎಲ್ಲಾ ಮರೆತು ಹೋಗಿತ್ತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನವ್ರು ರೈಲು, ಬಸ್ ಯಾವುದಲ್ಲಾದ್ರೂ ಹೋಗ್ಲಿ, ಆದ್ರೆ ಸಂದರ್ಭ ನೋಡಿ ಪ್ರತಿಭಟನೆ ಮಾಡ್ಲಿ: ಸುಧಾಕರ್

ದೇಶದಲ್ಲಿ, ರಾಜ್ಯದಲ್ಲಿ ವಿರೋಧ ಪಕ್ಷ ಇರಲೇಬೇಕು. ಆದರೆ ಇಂದು ವಿರೋಧ ಪಕ್ಷವೇ ಇಲ್ಲದ ಹಾಗೆ ಹೋಗಿದೆ. ಕೇಂದ್ರದಲ್ಲಿ ಅಧಿಕೃತವಾಗಿ ವಿರೋಧ ಪಕ್ಷವೇ ಇಲ್ಲ. ರಾಜ್ಯದಲ್ಲಿ ನಾಳೆ ಅಸೆಂಬ್ಲಿ ಚುನಾವಣೆ ಎದುರಾದರೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ವಿಪಕ್ಷದಲ್ಲಿ ಇರುವ ಪರಿಸ್ಥಿತಿಯೇ ಇಲ್ಲ.

ಯೋಜನೆ ಬಗ್ಗೆ ಕೇಂದ್ರದ ಗಮನಕ್ಕೆ ತಂದು ಏನೇನು ಆಗಬೇಕಿದೆಯೋ, ಆ ಕೆಲಸ ಮಾಡುತ್ತೇವೆ. ಮೇಕೆದಾಟು ಯೋಜನೆಯನ್ನು ಮಾಡಿಯೇ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದವರು, ಅವರಿಗೆ ಸರ್ಕಾರದ ನೀತಿ ನಿಯಮಗಳು ಗೊತ್ತಿಲ್ವಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ನಾವು ಸರ್ಕಾರದ ನಿರ್ಧಾರವನ್ನು ಧಿಕ್ಕರಿಸುತ್ತೇವೆ ಎಂದಿದ್ದೇವಾ. ನಮ್ಮನ್ನು ಅರೆಸ್ಟ್ ಮಾಡಿ, ಆದರೂ ಹೋರಾಟ ಮಾಡುತ್ತೇವೆ ಎನ್ನುತ್ತೀರಾ. ಇಂತಹ ಪೌರುಷದ ಮಾತು ಬೇಡ. ನೀವು ಹೋರಾಟ ಮಾಡಿ ಬೇಡ ಅನ್ನುವುದಿಲ್ಲ. ಆದರೆ ಜನರಿಗೆ ಒಳ್ಳೆಯದು ಆಗುವ ರೀತಿಯಲ್ಲಿ ಹೋರಾಟ ಮಾಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಹೋರಾಟ ಮಾಡ್ಬೇಡಿ – ಕಾಂಗ್ರೆಸ್‍ಗೆ ಕಾರಜೋಳ ಮನವಿ

Comments

Leave a Reply

Your email address will not be published. Required fields are marked *