Haveri | ಕೋಟಿ ಕೋಟಿ ಖರ್ಚು ಮಾಡಿ ರೈತರಿಗಾಗಿ ನಿರ್ಮಿಸಿದ ಮೆಗಾ ಮಾರ್ಕೆಟ್ ಪಾಳು

ಹಾವೇರಿ: ಜಿಲ್ಲೆಯಲ್ಲಿ ರೈತರಿಗಾಗಿ ನಿರ್ಮಿಸಿದ ಮೆಗಾ ಮಾರುಕಟ್ಟೆ (Mega Market) ಈಗ ಅನುಪಯುಕ್ತವಾಗಿದೆ. ರಾಣೆಬೆನ್ನೂರು (Ranebennur) ಬಳಿಯಿರುವ ಮೆಗಾ ಮಾರುಕಟ್ಟೆ ಹಲವು ವರ್ಷಗಳಿಂದ ಬಳಕೆಯಾಗದೇ ಪಾಳು ಬಿದ್ದಿದೆ. ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ ಮೆಗಾ ಮಾರ್ಕೆಟ್ ಈಗ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿದ ಮೆಗಾ ಮಾರ್ಕೆಟ್ ಪಾಳು ಬಿದ್ದಿದೆ. 522 ನಿವೇಶನಗಳಲ್ಲಿ ಕಸ ಬೆಳೆದಿದೆ. 129 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಮಾರುಕಟ್ಟೆ ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ. ರಾಣೆಬೆನ್ನೂರಿನ ಮಾರುಕಟ್ಟೆಯಲ್ಲಿ ಉಂಟಾಗುತ್ತಿದ್ದ ದಟ್ಟಣೆ ಹಾಗೂ ಸುಸಜ್ಜಿತ ಮಾರುಕಟ್ಟೆಯ ಅಗತ್ಯತೆಯನ್ನು ಪೂರೈಸುವ ಉದ್ದೇಶದಿಂದ ಮೆಗಾ ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತು. ರಾಜ್ಯದಲ್ಲಿಯೇ ಬೃಹತ್ ಪ್ರಮಾಣದ ಮಾರುಕಟ್ಟೆ ಇದಾಗಿದೆ. ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಬರುವ ರೈತರಿಗೆ ಒಂದೇ ಸೂರಿನಡಿ ವ್ಯಾಪಾರ-ವಹಿವಾಟು ಮಾಡಲು ಅನುಕೂಲವಾಗಲೆಂದು ಮಾರುಕಟ್ಟೆ ನಿರ್ಮಿಸಲಾಗಿದೆ. 222 ಎಕರೆ ಜಾಗದಲ್ಲಿ 2019ರಲ್ಲಿ ಆರಂಭವಾಗಿದ್ದ ಮೆಗಾ ಮಾರುಕಟ್ಟೆ ನಿರ್ಮಾಣ ಕಾಮಗಾರಿ, 2022ರಲ್ಲಿಯೇ ಮುಕ್ತಾಯಗೊಂಡಿದೆ. ಇದಾಗಿ ಎರಡು ವರ್ಷವಾದರೂ ಮಾರುಕಟ್ಟೆಯು ಎಪಿಎಂಸಿಗೆ ಹಸ್ತಾಂತರವಾಗಿಲ್ಲ. ಇದನ್ನೂ ಓದಿ: ಮುಡಾ ಕುರಿತು ಇ.ಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

2025ರ ಏಪ್ರಿಲ್ ಅಂತ್ಯದವರೆಗೂ ಹಸ್ತಾಂತರಕ್ಕೆ ಸಮಯ ಇರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಮಾರುಕಟ್ಟೆ ಪ್ರದೇಶ ಕ್ರಮೇಣ ಹಾಳಾಗುತ್ತಿದೆ. ರಾಣೆಬೆನ್ನೂರಿನಲ್ಲಿ ಗೋವಿನ ಜೋಳ, ಶೇಂಗಾ, ಹತ್ತಿ, ಸೂರ್ಯಕಾಂತಿ, ಜೋಳ, ಈರುಳ್ಳಿ ಹಾಗೂ ಬೆಳ್ಳುಳ್ಳಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದೇ ವ್ಯಾಪಾರವನ್ನು ಮೆಗಾ ಮಾರುಕಟ್ಟೆಗೆ ಹಸ್ತಾಂತರಿಸುವ ಉದ್ದೇಶ ಸರ್ಕಾರದ್ದಾಗಿದೆ. ಆದರೆ, ಮೆಗಾ ಮಾರುಕಟ್ಟೆ ಇದುವರೆಗೂ ಹಸ್ತಾಂತರವಾಗಿಲ್ಲ. ಮೆಗಾ ಮಾರುಕಟ್ಟೆಯ ಮುಖ್ಯರಸ್ತೆಯ ಎರಡೂ ಕಡೆ, ಉದ್ಯಾನ ಹಾಗೂ ಆಡಳಿತ ಕಟ್ಟಡಗಳ ಬಳಿ ಪೊದೆ ಬೆಳೆದಿದೆ. ಮರಗಳು ನೀರಿಲ್ಲದೇ ಒಣಗುತ್ತಿವೆ. ಎಲ್ಲೆಂದರಲ್ಲಿ ಹುಲ್ಲು ಬೆಳೆದು ಮಾರುಕಟ್ಟೆ ಗುರುತು ಸಿಗದಂತಾಗಿದೆ. ಮಾರುಕಟ್ಟೆಯಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ, ಹರಾಜು ಕಟ್ಟೆ, ಟೆಂಡರ್ ಕೊಠಡಿ, ರೈತ ಭವನ, ಮಳಿಗೆಗಳು, ಮಾಹಿತಿ ಕೇಂದ್ರ, ಶ್ರಮಿಕ ಭವನ, ಅತಿಥಿ ಗೃಹ, ಉಪಹಾರ ಗೃಹ, ಪ್ರಯೋಗಾಲಯ, ಕೃಷಿ ಉತ್ಪನ್ನ ಒಣಗಿಸುವ ಕಟ್ಟೆ, ಶೌಚಾಲಯ ನಿರ್ಮಿಸಲಾಗಿದೆ. ಮಾರುಕಟ್ಟೆ ಪಾಳು ಬಿದ್ದಿದ್ದರಿಂದ ಅಕ್ರಮ ಚಟುವಟಿಕೆ ತಾಣವಾಗಿಯೂ ಮಾರ್ಪಟ್ಟಿದೆ. ಇದನ್ನೂ ಓದಿ: Kotekar Bank Robbery | ಗುಪ್ತಚರ ಇಲಾಖೆ ಸಹಾಯದಿಂದ ಆರೋಪಿಗಳ ಬಂಧನ: ಕಮಿಷನರ್ ಅನುಪಮ್ ಅಗರ್ವಾಲ್

ಮೆಗಾ ಮಾರುಕಟ್ಟೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮಾರುಕಟ್ಟೆಯಲ್ಲಿರುವ ಎಲ್ಲಾ ನಿವೇಶನಗಳನ್ನು ತ್ವರಿತವಾಗಿ ಹಂಚಿಕೆ ಮಾಡಬೇಕು. ಕೃಷಿ ಉತ್ಪನ್ನಗಳ ವಹಿವಾಟು ಆರಂಭವಾದರೆ, ರೈತರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮುಸ್ಲಿಂ ವ್ಯಕ್ತಿ ಮತಾಂತರ – ದೇವಾಲಯದಲ್ಲಿ ವಿವಾಹ