ಇಂಡೋ-ಪಾಕ್ ಪಂದ್ಯದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಯುವಕ: ವಿಡಿಯೋ ವೈರಲ್

ಅಬುದಾಬಿ: ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಯುವಕನೊಬ್ಬ ಭಾರತದ ರಾಷ್ಟ್ರಗೀತೆಯನ್ನು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜಾಲತಾಣಿಗರಿಂದ ಮೆಚ್ಚುಗೆಯ ಸುರಮಳೆಯೇ ಹರಿದಿದೆ.

ಪಾಕಿಸ್ತಾನದ ಆದಿಲ್ ತಾಜ್ ಭಾರತದ ರಾಷ್ಟ್ರಗೀತೆಯನ್ನು ಹಾಡಿದ ಯುವಕ. ಸೆಪ್ಟೆಂಬರ್ 19 ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಪಂದ್ಯದ ಲೀಗ್ ಪಂದ್ಯದಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಬರೋಬ್ಬರಿ 15 ತಿಂಗಳ ಬಳಿಕ ಎದುರಾಗಿದ್ದವು. ಈ ವೇಳೆ ಪಂದ್ಯಕ್ಕೂ ಮುನ್ನ ಎರಡು ರಾಷ್ಟ್ರಗಳ ರಾಷ್ಟ್ರಗೀತೆಯನ್ನು ಹಾಕಿದ್ದರು. ಈ ವೇಳೆ ಭಾರತದ ರಾಷ್ಟ್ರಗೀತೆಯನ್ನು ಆದಿಲ್ ತಾಜ್ ರವರು ಹಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆದಿಲ್ ತಾಜ್, ನಾನು ಭಾರತದ ರಾಷ್ಟ್ರಗೀತೆಯನ್ನು ಮೊದಲ ಬಾರಿ ಕೇಳಿದ್ದು, ಬಾಲಿವುಡ್‍ನ `ಕಬಿ ಖುಷಿ ಕಬಿ ಗಂ’ ಚಿತ್ರದಲ್ಲಿ. ನನಗೆ ರಾಷ್ಟ್ರಗೀತೆಯನ್ನು ಕೇಳುತ್ತಲೇ ರೋಮಾಂಚನವಾಗಿತ್ತು. ಅಲ್ಲದೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿಗಾಗಿ ನನ್ನ ಕಡೆಯಿಂದ ಸಣ್ಣ ಪ್ರಯತ್ನ ಎನ್ನುವಂತೆ ನಾನು ಭಾರತದ ರಾಷ್ಟ್ರಗೀತೆಯನ್ನು ಹಾಡಿದೆ ಎಂದು ಹೇಳಿದ್ದಾರೆ.

ಉಭಯ ದೇಶಗಳ ನಡುವೆ ಶಾಂತಿಗಾಗಿ ಇದು ನನ್ನ ಸಣ್ಣ ಪ್ರಯತ್ನವಾಗಿದೆ. ಹೀಗೆ ಮಾಡುವುದಕ್ಕೆ ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ರವರ ಪ್ರೇರಣೆಯೂ ಇದೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ಶಾಂತಿ ಸ್ಥಾಪನೆ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಬಂದರೆ, ನಾವು ಎರಡು ಹೆಜ್ಜೆ ಮುಂದೆ ಹೋಗುತ್ತೇನೆ ಎಂದು ಹೇಳಿದ್ದರು. ಪಂದ್ಯಕ್ಕೂ ಮುನ್ನ ಭಾರತದ ರಾಷ್ಟ್ರಗೀತೆ ಮೊಳಗಿದಾಗ ಇಮ್ರಾನ್ ಖಾನ್‍ರ ಮಾತು ನೆನೆಪಾಗಿ, ಶಾಂತಿ ಸ್ಥಾಪನೆಗೆ ನನ್ನದು ಸಹ ಪಾತ್ರವಿರಬೇಕು ಎನ್ನುವ ನಿಟ್ಟಿನಲ್ಲಿ ನಾನು ಹಾಡಿದೆ ಎಂದು ತಿಳಿಸಿದರು.

ಅಲ್ಲದೇ ಪಾಕಿಸ್ತಾನದ ರಾಷ್ಟ್ರಗೀತೆ ಮೊಳಗಿದಾಗ ಭಾರತೀಯರು ಗೌರವ ಸಮರ್ಪಿಸಿದ್ದನ್ನು ಗಮನಿಸಿದ್ದೆ. ಮತ್ತೊಮ್ಮೆ ಭಾನುವಾರ(ಇಂದು) ನಡೆಯುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಎರಡು ರಾಷ್ಟ್ರಗಳ ಧ್ವಜವನ್ನು ಹಿಡಿದು ಹೋಗುತ್ತೇನೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

 

Comments

Leave a Reply

Your email address will not be published. Required fields are marked *