ಬೆಂಗಳೂರು: ಮಾನವ ಸಂಪನ್ಮೂಲ ಅಧಿಕಾರಿಯೊಬ್ಬ ಕಾರ್ಖಾನೆಯೊಂದರ ಬೋರ್ಡ್ ಕಾಣುವುದಿಲ್ಲ ಎಂದು ರಸ್ತೆ ಬದಿಯಲ್ಲಿದ್ದ ನೂರಾರು ಮರಗಳನ್ನು ಕಡಿದು ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಡಿ.ಶೆಟ್ಟಿಹಳ್ಳಿ ಗೇಟ್ ಬಳಿ ನಡೆದಿದೆ.
ಮೆಡ್ರಿಕ್ ಕಂಪನಿ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿದ್ದು, ಪ್ರತಿ ದಿನ ಈ ದಾರಿಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಆದ್ರೆ ಈ ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ಮರಗಳು ಅಡ್ಡಿಯಾಗಿರುವುದರಿಂದ ಕಾರ್ಖಾನೆಯ ಬೋರ್ಡ್ ಕಾಣುವುದಿಲಲ್ಲ ಎನ್ನುವ ಒಂದೇ ಕಾರಣಕ್ಕೆ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಯವರು ನೆಟ್ಟು ಪೋಷಣೆ ಮಾಡಲಾಗಿದ್ದ 300 ಮರಗಳನ್ನು ಕಡಿದು ನಾಶ ಮಾಡಿದ್ದಾನೆ ಎಂದು ಸ್ಥಳೀಯ ನಿವಾಸಿ ನಾರಾಯಣ ಗೌಡ ಆರೋಪಿಸಿದ್ದಾರೆ.

ಸ್ಥಳೀಯ ಪರಿಸರ ಪ್ರೇಮಿಗಳು ಕಾರ್ಖಾನೆಯವರು ಪರಿಸರ ನಾಶ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪರಿಸರ ಪ್ರೇಮ ಮೆರೆಯಬೇಕಾದ ಕಂಪನಿ ಈ ರೀತಿಯ ಅವಿವೇಕದ ಕೆಲಸ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ರಸ್ತೆ ಬದಿಯಲ್ಲಿ ನೆಟ್ಟಿದ್ದ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೆ 300 ಮೀಟರ್ ವ್ಯಾಪ್ತಿಯಲ್ಲಿ ಬೆಳೆದಿದ್ದ ಮರಗಳನ್ನು ನಾಶ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಮರಗಳನ್ನು ಕಡಿದ ಕಾರ್ಖಾನೆಯವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ಮತ್ತೆ ಸಸಿಗಳನ್ನು ನೆಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply