ಮಾಂಸ ರಫ್ತುದಾರ ಮೋಯಿನ್ ಖುರೇಷಿಯನ್ನು ಬಂಧಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ಕಪ್ಪು ಹಣ ಸಂಗ್ರಹದ 3 ವರ್ಷಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶುಕ್ರವಾರ ರಾತ್ರಿ ಮಾಂಸ ರಫ್ತುದಾರ ಮೋಯಿನ್ ಖುರೇಷಿಯನ್ನು ಬಂಧಿಸಿದೆ.

ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್(ಪಿಎಮ್‍ಎಲ್‍ಎ) ಅಡಿಯಲ್ಲಿ ಖುರೇಷಿಯನ್ನು ಬಂಧಿಸಲಾಗಿದ್ದು, ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ.

ಉದ್ಯಮಿ ಖುರೇಷಿ ಅವರನ್ನು ವಿಚಾರಣೆಗಾಗಿ ನವದೆಹಲಿಗೆ ಕರೆಸಿದ ನಂತರ ಬಂಧನ ಮಾಡಲಾಗಿದೆ. ವಿಚಾರಣೆಗೆ ಖುರೇಷಿ ಸಹಕರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಯಾರು ಈ ಮೋಯಿನ್ ಖುರೇಷಿ? ಕಾನ್ಪುರದ ಮಾಂಸ ರಫ್ತುದಾರ ಖುರೇಷಿ ಕಳೆದ ವರ್ಷ ಅಕ್ಟೋಬರ್‍ನಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದು ಸುದ್ದಿಯಾಗಿತ್ತು. ದುಬೈಗೆ ಹೊರಡಲು ವಿಮಾನವೇರುವ ವೇಳೆ ಖುರೇಷಿಯನ್ನು ಬಂಧಿಸಲಾಗಿತ್ತು. ತೆರಿಗೆ ವಂಚನೆ ಹಾಗೂ ಹವಾಲಾ ಡೀಲಿಂಗ್ ಆರೋಪಗಳು ಖುರೇಷಿ ಮೇಲಿವೆ. ಜಾರಿ ನಿರ್ದೇಶನಾಲಯವನ್ನು ಹೊರತುಪಡಿಸಿ ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐ ನಿಂದ ಕೂಡ ಖುರೇಷಿ ಕಪ್ಪು ಹಣ ಸಂಗ್ರಹಣೆ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ.

ಪಿಎಮ್‍ಎಲ್‍ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಮೊದಲು 2014ರಲ್ಲಿ ನಂತರ 2015ರಲ್ಲಿ ಎರಡು ಪ್ರಕರಣಗಳನ್ನ ದಾಖಲಿಸಿಕೊಂಡಿತ್ತು. ಎಫ್‍ಐಆರ್‍ನಲ್ಲಿ ಮಾಜಿ ಸಿಬಿಐ ನಿರ್ದೇಶಕ ಎಪಿ ಸಿಂಗ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ಹೆಸರು ಇದೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಳೆದ ತಿಂಗಳು ಜಾರಿ ನಿದೇಶನಾಲಯ ದಕ್ಷಿಣ ದೆಹಲಿಯ ಎರಡು ಕಡೆ ಶೋಧ ನಡೆಸಿತ್ತು. ವಿದೇಶಗಳಿಗೆ ಅನುಮಾನಾಸ್ಪದವಾಗಿ ಹಣ ವರ್ಗಾವಣೆ ಸಂಬಂಧ ದಾಖಲೆಗಳು ಹಾಗೂ ಆಭರಣಗಳನ್ನು ವಶಪಡಿಸಿಕೊಂಡಿತ್ತು.

Comments

Leave a Reply

Your email address will not be published. Required fields are marked *