ಪುಂಡಪೋಕರಿಗಳಿಗೆ ಪಾಸ್ ಕೊಟ್ಟಿಲ್ಲ: ಮೇಯರ್-ಡಿಸಿ ನಡುವೆ ಫೈಟ್

– ನಾನು ಸಣ್ಣ ಹುಡುಗ ಅಲ್ಲ, ಪಾಸ್ ಮಾರಾಟ ಮಾಡಿಕೊಂಡಿಲ್ಲ

ದಾವಣಗೆರೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಅಗತ್ಯ ಸೇವೆಗಳಿಗೆ ಮನೆಯಿಂದ ಹೊರಬರಬೇಕಾದರೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸರಿಂದ ಪಾಸ್ ತೆಗೆದುಕೊಂಡು ಮನೆಯಿಂದ ಹೊರಬರಬಹುದು. ಆದರೆ ಈ ಪಾಸ್ ವಿಚಾರದಲ್ಲಿ ದಾವಣಗೆರೆಯ ಮೇಯರ್ ಮತ್ತು ಡಿಸಿ ನಡುವೆ ಫೈಟ್ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸೇವೆಗಳಿಗೆ ಪಾಸ್ ವಿತರಣೆ ಮಾಡಿದ್ದರು. ಮೇಯರ್ ಕೂಡ ಪಾಲಿಕೆ ವತಿಯಿಂದ ವ್ಯಾಪಾರಸ್ಥರಿಗೆ ಸಾವಿರಾರು ಪಾಸ್ ವಿತರಿಸಿದ್ದರು. ಆದರೆ ಮೇಯರ್ ನೀಡಿದ ಪಾಸ್ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮೇಯರ್ ನೀಡಿದ್ದ ಪಾಸ್‍ಗಳನ್ನು ಅಸಿಂಧು ಮಾಡಿದ್ದಾರೆ. ಈ ವಿಚಾರದಲ್ಲಿ ಮೇಯರ್ ಬಿ.ಜಿ.ಅಜಯ್‍ಕುಮಾರ್ ಮತ್ತು ಡಿಸಿ ಮಹಾಂತೇಶ್ ಬೀಳಗಿ ನಡುವೆ ಜಗಳ ನಡೆದಿದೆ.

ನಾನು ಪುಂಡಪೋಕರಿಗಳಿಗೆ ಪಾಸ್ ಕೊಟ್ಟಿಲ್ಲ. ಕಳೆದ 15 ದಿನಗಳಿಂದ ಪಾಸ್‍ಗಾಗಿ ಪಾಲಿಕೆ ಪರದಾಡಿದೆ. ಆದರೆ ಜಿಲ್ಲಾಡಳಿತ ಪಾಸ್ ಕೊಡಲಿಲ್ಲ. ನಾನು ವ್ಯಾಪಾರಿಗಳ ಕಷ್ಟ ನೋಡಲಾಗದೆ ಪಾಸ್ ನೀಡಿರುವೆ. ಆದರೆ ನಾನು ಪಾಸ್ ಮಾರಾಟ ಮಾಡಿಕೊಂಡಿಲ್ಲ. ಮೇಯರ್ ಸ್ಥಾನದಲ್ಲಿ ಕುಳಿತ ನನಗೆ ಕನಿಷ್ಠ ಜ್ಞಾನ ಇದೆ ಎಂದು ಡಿಸಿಗೆ ಮೇಯರ್ ಬಿ.ಜಿ. ಅಜಯ್‍ಕುಮಾರ್ ತಿರುಗೇಟು ನೀಡಿದ್ದಾರೆ.

ನಾನು ಸಣ್ಣ ಹುಡುಗ ಅಲ್ಲ, ಪಾಲಿಕೆ ಸದಸ್ಯರ ಆಗ್ರಹದ ಮೇಲೆ ಪಾಸ್ ನೀಡಲಾಗಿದೆ. ಅಷ್ಟೇ ಅಲ್ಲದೇ ಎಲ್ಲ ದಾಖಲೆ ಪಡೆದು ಪಾಸ್ ನೀಡಲಾಗಿದೆ. ನಾನು ಕೊಟ್ಟ ಪಾಸ್ ಅಸಿಂಧು ಮಾಡಿ. ಆದರೆ ಬೇಕಾದಷ್ಟು ಪಾಸ್ ಜಿಲ್ಲಾಡಳಿತ ನೀಡಲಿ ಎಂದು ಮೇಯರ್ ಗರಂ ಆಗಿ ಮಾತನಾಡಿದರು.

Comments

Leave a Reply

Your email address will not be published. Required fields are marked *