ಕಾಂಗ್ರೆಸ್ ಮುಕ್ತ ಅನ್ನೋ ಬಿಜೆಪಿ ಸಂಸದರಿಂದ ಕೈಗೆ ಮತ!

– ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕೈ ಅಭ್ಯರ್ಥಿಗೆ ಶ್ರೀರಾಮುಲು ಮತ

ಬಳ್ಳಾರಿ: ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಮುಂದಿನ ಗುರಿ. ಹೀಗಂತ ಬಿಜೆಪಿ ನಾಯಕರು ಕಂಡ ಕಂಡ ಸಭೆಗಳಲ್ಲಿ ಬೊಬ್ಬೆ ಹಾಕಿ ಭಾಷಣ ಮಾಡ್ತಾರೆ. ಆದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಸಂಸದರು ಮತ ಹಾಕಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೆಂಕಟರಮಣ ಪರವಾಗಿ ಸಂಸದ ಶ್ರೀರಾಮುಲು ಹಾಗೂ ನಾಲ್ಕು ಬಿಜೆಪಿ ಸದಸ್ಯರು ಮತ ಚಲಾವಣೆ ಮಾಡಿದ್ದಾರೆ.

ಮೇಯರ್, ಉಪಮೇಯರ್ ಸ್ಥಾನಕ್ಕೆ ಬಹುಮತ ಹೊಂದಿರುವ ಕಾಂಗ್ರೆಸ್ಸಿನ ಎರಡು ಗುಂಪುಗಳ ಮಧ್ಯೆ  ಪೈಪೋಟಿ ಎರ್ಪಟಿತ್ತು. ಸಚಿವ ಸಂತೋಷ ಲಾಡ್ ಗುಂಪಿನ ಪರವಾಗಿ ಮೇಯರ್ ಸ್ಥಾನಕ್ಕೆ ವೆಂಕಟರಮಣ, ಉಪಮೇಯರ್ ಸ್ಥಾನಕ್ಕೆ ಉಮಾದೇವಿ ಸ್ಪರ್ಧೆ ನಡೆಸಿದ್ದರು.

ಮಾಜಿ ಸಚಿವ ದಿವಾಕರಬಾಬು ಗುಂಪಿನಿಂದ ಗಾಜಲು ಶ್ರೀನಿವಾಸ ಹಾಗೂ ಲಕ್ಷ್ಮಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಪಕ್ಷದಿಂದ ಮೇಯರ್ ಸ್ಥಾನಕ್ಕೆ ವೆಂಕಟರಮಣ ಪರವಾಗಿ, ಉಪಮೇಯರ್‍ಗೆ ಲಕ್ಷ್ಮಿ ಪರವಾಗಿ ಮತ ಹಾಕುವಂತೆ ವಿಪ್ ಜಾರಿ ಮಾಡಲಾಗಿತ್ತು.

ದಿವಾಕರ ಬಾಬು ಗುಂಪಿನ ಸದಸ್ಯರು ವಿಪ್ ಸ್ವೀಕರಿಸಿದ್ರೆ. ಸಚಿವ ಸಂತೋಷ ಲಾಡ್ ಗುಂಪಿನ ಸದಸ್ಯರು ವಿಪ್ ಸ್ವೀಕರಿಸದೆ ಚುನಾವಣೆಗೆ ಹಾಜರಾದರು. ಹೀಗಾಗಿ ದಿವಾಕರ ಬಾಬು ಗುಂಪಿನ 16 ಸದಸ್ಯರು ಚುನಾವಣೆಯಿಂದ ದೂರ ಉಳಿದರು. ಇದರಿಂದ ಕೆಲ ಕಾಲ ಪಾಲಿಕೆ ಆವರಣದಲ್ಲಿ ಹೈಡ್ರಾಮಾ ಸಹ ನಡೆಯಿತು.

ಕೊನೆಗೆ ವೆಂಕಟರಮಣ 24 ಮತ ಪಡೆದು ಮೇಯರ್ ಆದ್ರೆ, ಉಮಾದೇವಿ 20 ಮತಗಳನ್ನು ಪಡೆದು ಉಪ ಮೇಯರ್ ಆಗಿ ಆಯ್ಕೆಯಾದರು. ಚುನಾವಣೆ ನಂತರ ಮಾತನಾಡಿದ ಸಂಸದ ಶ್ರೀರಾಮುಲು, ನಾನು ಬಳ್ಳಾರಿ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಿದ್ದೇನೆಂದು ಸಮಜಾಯಿಸಿ ನೀಡಿದರು.

Comments

Leave a Reply

Your email address will not be published. Required fields are marked *