ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

ಬೆಂಗಳೂರು: ಇತ್ತೀಚೆಗಷ್ಟೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ನಡೆದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಯುವ ವೇಗಿ ಮಯಾಂಕ್‌ ಯಾದವ್‌ (Mayank Yadav) ಅಮೋಘ ಸಾಧನೆ ಮಾಡಿದ್ದಾರೆ. ಇಡೀ ಕ್ರಿಕೆಟ್‌ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಅತೀ ವೇಗದ ಬೌಲರ್ (Fastest Bowlers) ಎನಿಸಿಕೊಂಡಿದ್ದಾರೆ. ಮಗನ ಸಾಧನೆಯನ್ನು ಕಂಡ ತಾಯಿ ತಮ್ಮ ಖುಷಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಯಾಂಕ್‌ ಯಾದವ್‌ ಅವರ ಫಿಟ್‌ನೆಸ್‌ (Fitness) ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾರೆ.

ಮಯಾಂಕ್‌ ತಾಯಿ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡಿದ ಮಯಾಂಕ್‌ ಅವರ ತಾಯಿ ಮಮತಾ ಯಾದವ್‌, ಕಳೆದ 2 ವರ್ಷಗಳಿಂದ ನನ್ನ ಮಗ ಸಸ್ಯಾಹಾರಿಯಾಗಿ ಬದಲಾಗಿದ್ದಾನೆ. ಅದಕ್ಕೂ ಮುನ್ನ ಮಾಂಸಾಹಾರ ಸೇವನೆ ಮಾಡುತ್ತಿದ್ದ. ಪ್ರತಿದಿನ ಡಯಟ್‌ ಚಾರ್ಟ್‌ ಆಧಾರದಲ್ಲಿ ಏನು ಮಾಡಬೇಕು ಅಂತ ಅವನೇ ನಮಗೆ ಹೇಳುತ್ತಾನೆ. ಅವನು ಕೇಳಿದ್ದನ್ನ ನಾವು ಮಾಡಿಕೊಡ್ತೇವೆ. ಮಾಂಸಾಹಾರ ಸೇವಿಸುತ್ತಿದ್ದಾಗ ದಾಲ್, ರೊಟ್ಟಿ, ಅನ್ನ, ಹಾಲು, ತರಕಾರಿಗಳು ಇತ್ಯಾದಿ ಏನನ್ನೂ ತಿನ್ನುತ್ತಿರಲಿಲ್ಲ. ಆದ್ರೆ ಬಳಿಕ ಸಸ್ಯಾಹಾರಕ್ಕೆ (Vegetarian) ಬದಲಾದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಿಸ್ಟರ್‌-360 ಸೂರ್ಯಕುಮಾರ್‌ ಕಂಬ್ಯಾಕ್‌ – ಮುಂಬೈ ತಂಡಕ್ಕಿನ್ನು ಆನೆ ಬಲ!

ಮಯಾಂಕ್‌ ಮಾಂಸಾಹಾರ ತ್ಯಜಿಸಿದ್ದೇಕೆ?
ಮಯಾಂಕ್‌ ಏಕೆ ಮಾಂಸಾಹಾರ ತ್ಯಜಿಸಿದ್ದಾನೆ ಎಂಬುದಕ್ಕೂ ಅವರ ತಾಯಿ ಉತ್ತರ ಕೊಟ್ಟಿದ್ದಾರೆ. ಹೌದು. ಮಯಾಂಕ್‌ ಮಾಂಸಾಹಾರ ತ್ಯಜಿಸಲು ಎರಡು ಮುಖ್ಯ ಕಾರಣಗಳಿವೆ. ಅವರು, ಶ್ರೀಕೃಷ್ಣನಲ್ಲಿ ಅಪಾರ ನಂಬಿಕೆಯಿಟ್ಟಿದ್ದರು ಮತ್ತು ಮಾಂಸಾಹಾರ (Non Veg Food) ದೇಹಕ್ಕೆ ಸರಿಹೊಂದುತ್ತಿರಲಿಲ್ಲ. ಆದ್ರೆ ನಮಗೆ ಅವನ ಕ್ರೀಡೆ ಮತ್ತು ದೇಹಕ್ಕೆ ಅಗತ್ಯವಾದುದ್ದನ್ನೇ ಅವನು ಮಾಡುತ್ತಿದ್ದಾನೆ ಅನ್ನಿಸಿತು ಎಂಬುದಾಗಿ ತಾಯಿ ಮಮತಾ ಹೇಳಿದ್ದಾರೆ. ಇದೇ ವೇಳೆ ಶೀಘ್ರದಲ್ಲೇ ತಮ್ಮ ಮಗ ಟೀಂ ಇಂಡಿಯಾ ಜರ್ಸಿ ಧರಿಸಿ ಆಡುವುದನ್ನು ನೋಡಲು ಬಯಸುತ್ತೇವೆ ಎಂದು ಬಯಕೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಮಯಾಂಕ್‌ ದಾಖಲೆ:
21 ವರ್ಷ ವಯಸ್ಸಿನ ಮಯಾಂಕ್‌ ಯಾದವ್‌ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆಯನ್ನೂ ಬರೆದಿದ್ದಾರೆ. 150 ಕಿಮೀಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿದ 4ನೇ ಬೌಲರ್‌ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

ವೇಗದ ಬೌಲಿಂಗ್‌ ಮಾಡಿದ ಟಾಪ್‌-5 ಆಟಗಾರರು:
* ಶಾನ್‌ ಟೈಟ್‌ – 2011ರಲ್ಲಿ – 157.7 ಕಿಮೀ
* ಲಾಕಿ ಫರ್ಗೂಸನ್‌ – 2022ರಲ್ಲಿ – 157.3 ಕಿಮೀ
* ಉಮ್ರಾನ್‌ ಮಲಿಕ್‌ – 2022ರಲ್ಲಿ – 157.0 ಕಿಮೀ
* ಮಯಾಂಕ್‌ ಯಾದವ್‌ – 2024ರಲ್ಲಿ – 156.7 ಕಿಮೀ
* ಅನ್‌ರಿಚ್‌ ನಾರ್ಟೆ – 2020ರಲ್ಲಿ – 156.2 ಕಿಮೀ