60ರ ಮಹಿಳೆ ಮೇಲೆ ಐವರಿಂದ ಅತ್ಯಾಚಾರಕ್ಕೆ ಯತ್ನ – ಗ್ರಾಮದ ಪಂಚಾಯ್ತಿಯಲ್ಲಿ ಕಾಮುಕರಿಗೆ ವಿಚಿತ್ರ ಶಿಕ್ಷೆ

ಲಕ್ನೋ: ಹಿರಿಯ ವಯಸ್ಸಿನ ಮಹಿಳೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದು, ಈಗ ಅವರಿಗೆ ನೀಡಿರುವ ಶಿಕ್ಷೆಯ ವಿಡಿಯೋ ವೈರಲ್ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಸದಸ್ಯರು ನ್ಯಾಯ ಪಂಚಾಯಿತಿ ಮಾಡಿದ್ದು, ಐವರು ಆರೋಪಿಗಳಿಗೆ ಸಂತ್ರಸ್ತೆಯ ಕೈಯಿಂದ ಐದು ಬಾರಿ ಚಪ್ಪಲಿ ಏಟು ಹೊಡೆಸಿದ್ದು, 5,100 ರೂ. ದಂಡವನ್ನು ವಿಧಿಸಿ ಶಿಕ್ಷೆಯನ್ನು ನೀಡಿದೆ.

ಘಟನೆಯ ವಿವರ: ಸಂತ್ರಸ್ತೆ ರಾತ್ರಿ ಮನೆಯ ಮುಂದೆ ಮಲಗಿದ್ದರು. ಈ ವೇಳೆ ಬಂದ ಐವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮಹಿಳೆ ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಐವರು ಕೊಲೆ ಬೆದರಿಕೆಯನ್ನು ಹಾಕಿದ್ದಾರೆ. ತಾಯಿಯ ಕಿರುಚಾಟ ಕೇಳುತ್ತಿದ್ದಂತೆ ಮಗ ಬಂದಿದ್ದಾನೆ. ಕೂಡಲೇ ಎಲ್ಲ ಕಾಮುಕರು ಓಡಿ ಹೋಗಿದ್ದಾರೆ. ಬೆಳಗ್ಗೆ ಮಹಿಳೆ ತನ್ನ ಮೇಲಾದ ದೌರ್ಜನ್ಯವನ್ನು ನೆರೆಹೊರೆಯ ಜನಕ್ಕೆ ತಿಳಿಸಿದ್ದಾರೆ.

ವಿಷಯ ತಿಳಿದ ಗ್ರಾಮಸ್ಥರು ಸಂತ್ರಸ್ತೆಯ ಮನೆಗೆ ದೌಡಾಯಿಸಿ ಬಂದು ಐವರನ್ನು ಹಿಡಿದು ಪಂಚಾಯಿತಿ ಮಾಡಿದ್ದಾರೆ. ಗ್ರಾಮದ ಪಂಚಾಯತ್ ಮುಖ್ಯಸ್ಥ ಸೇರಿ ಐವರು ಆರೋಪಿಗಳಿಗೆ ಸಂತ್ರಸ್ತೆಯ ಕೈಯಿಂದ ಒಬ್ಬೊಬ್ಬರಿಗೆ ಐದು ಬಾರಿ ಚಪ್ಪಲಿ ಏಟು ಮತ್ತು 5100 ರೂ ದಂಡವನ್ನು ವಿಧಿಸಿದ್ದಾನೆ. ವೃದ್ಧೆ ಮತ್ತು ಕುಟುಂಬಸ್ಥರು ಆರೋಪಿಗಳ ವಿರುದ್ಧ ದೂರು ನೀಡಲು ಹಿಂದೇಟು ಹಾಕಿದ್ದರು.

ವಿಡಿಯೋ ವೈರಲ್: ಐವರು ಆರೋಪಿಗಳಿಗೆ ಸಂತ್ರಸ್ತೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ಗಮನಿಸಿದ ನಂತರ ಪೊಲೀಸರು ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಪಡೆದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗ್ರಾಮಕ್ಕೆ ಆಗಮಿಸಿದ ಪೊಲೀಸರು ಸಂತ್ರಸ್ತೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳು 50 ವರ್ಷದವರಾಗಿದ್ದು, ಮಹಿಳೆಯ ನೆರೆಮನೆಯವರೇ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈ ಕೃತ್ಯ ಎಸಗಲು ಪ್ರಯತ್ನಿಸಿದಾಗ ಅವರೆಲ್ಲರೂ ಮದ್ಯದ ನಶೆಯಲ್ಲಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಗ್ರಾಮಕ್ಕೆ ಬಂದು ಸಂತ್ರಸ್ತೆಯಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಂತೆ ಐವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *