Maharashtra Accident: ಮತ್ತೊಂದು ಭೀಕರ ಅಪಘಾತದಲ್ಲಿ 10 ಮಂದಿ ಸಾವು

– 20ಕ್ಕೂ ಹೆಚ್ಚು ಮಂದಿಗೆ ಗಾಯ

ಮುಂಬೈ: ಮಹಾರಾಷ್ಟ್ರದ (Maharashtra) ಧುಲೆ ಜಿಲ್ಲೆಯ ಹೆದ್ದಾರಿಯಲ್ಲಿ ಟ್ರಕ್‌ವೊಂದು (Truck) ಹೋಟೆಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕೇ ದಿನಗಳಲ್ಲಿ 36 ಮಂದಿ ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಮೂರು ಮಕ್ಕಳು ಸೇರಿದಂತೆ 25 ಜನರು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಎಕ್ಸ್‌ಪ್ರೆಸ್‌ವೇಯಲ್ಲಿ (Maharashtra Expressway)  ನಡೆದಿತ್ತು. ಆ ನಂತರ ಇದು ಈ ತಿಂಗಳ ಆರಂಭದಲ್ಲೇ ನಡೆದ 2ನೇ ದುರಂತವಾಗಿದೆ.

ರಾಜ್ಯ ರಾಜಧಾನಿಯಿಂದ 300 ಕಿಮೀ ದೂರದಲ್ಲಿರುವ ಧುಲೆಯ ಮುಂಬೈ-ಆಗ್ರಾ ಹೆದ್ದಾರಿಯ ಪಲಾಸ್ನರ್ ಗ್ರಾಮದ ಬಳಿ ಬೆಳಗ್ಗೆ 10.45 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ದುರಂತ – 25 ಮಂದಿ ಸಜೀವ ದಹನ

ಟ್ರಕ್‌ನ ಬ್ರೇಕ್ ವಿಫಲವಾಗಿದ್ದರಿಂದ ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ಅತೀ ವೇಗದಲ್ಲಿ ಚಲಿಸುತ್ತಿದ್ದ ಟ್ರಕ್‌ ಹಿಂಬದಿಯಿಂದ ಎರಡು ದ್ವಿಚಕ್ರವಾಹನ, ಒಂದು ಕಾರು ಹಾಗೂ ಇನ್ನೊಂದು ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಟ್ರಕ್ ಹೆದ್ದಾರಿಯಲ್ಲಿ ಬಸ್ ನಿಲ್ದಾಣದ ಬಳಿ ಹೋಟೆಲ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ಟ್ರಕ್‌ ಮಧ್ಯಪ್ರದೇಶದಿಂದ ಧುಲೆ ಕಡೆಗೆ ಹೋಗುತ್ತಿತ್ತು. ಇದೇ ಮಾರ್ಗದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಕೆಲವರು ಅಪಘಾತಕ್ಕೀಡಾಗಿದ್ದಾರೆ. ಇದನ್ನೂ ಓದಿ: ಹಂತ ಹಂತವಾಗಿ ಮೀಸಲಾತಿ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ – 25,000 ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಗಾಯಾಳುಗಳನ್ನ ಶಿರ್‌ಪುರ ಮತ್ತು ಧುಲೆ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]