ಡಿಕೆಶಿ ಹೇಳಿಕೆಗೆ ಭಾರೀ ವಿರೋಧ; ಗ್ಯಾರಂಟಿಯಿಂದ ಮಂಗಳೂರಿಗರು ಹೊಟ್ಟೆಬಟ್ಟೆ ಕಟ್ಟಿಕೊಳ್ತಿಲ್ಲ: ಸುನಿಲ್ ಕುಮಾರ್

ಬೆಂಗಳೂರು: ಕಾಂಗ್ರೆಸ್‌ನವರ (Congress) ಗ್ಯಾರಂಟಿಗಾಗಿ (Guarantee Scheme) ಹೊಟ್ಟೆಬಟ್ಟೆ ಕಟ್ಟಿಕೊಳ್ಳುವ ದಯನೀಯ ಸ್ಥಿತಿ ಮಂಗಳೂರಿನ ಜನರಿಗೆ ಬಂದಿಲ್ಲ. ಗ್ಯಾರಂಟಿ ಘೋಷಣೆಯ ಬಳಿಕವೂ ಉಡುಪಿ-ದಕ್ಷಿಣ ಕನ್ನಡದಲ್ಲಿ ಮಖಾಡೆ ಮಲಗಿರುವ ಕಾಂಗ್ರೆಸ್ ಅನ್ನು ಎಬ್ಬಿಸುವುದಕ್ಕೆ ವಿಶೇಷ ಯೋಜನೆ ರೂಪಿಸಿ ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ (Sunil Kumar) ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಮಂಗಳೂರು ಜನರ ಬಗ್ಗೆ ಮಾತನಾಡುವಾಗ, ಡಿಸಿಎಂ ಡಿಕೆ ಶಿವಕುಮಾರ್, ಡ್ಯಾಮೇಜಿಂಗ್ ಹೇಳಿಕೆ ಕೊಟ್ಟಿದ್ದರು. ಮಂಗಳೂರು ಜನ ಗ್ಯಾರಂಟಿ ಬೇಡ ಅಂದಿದ್ದರು. ಅವರೇ ಮೊದಲು ಕ್ಯೂನಲ್ಲಿ ನಿಂತಿದ್ದರು. ಮಂಗಳೂರು ಜನಕ್ಕೆ ಹೊಟ್ಟೆಬಟ್ಟೆಗೆ ಕಾಂಗ್ರೆಸ್ ಬೇಕು. ವೋಟ್‌ಗೆ ಬೇರೆಯವರು ಬೇಕು ಅಂತ ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನೂ ಓದಿ: ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ

ಡಿಕೆಶಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್, ಡಿ.ಕೆ.ಶಿವಕುಮಾರ್ ಅವರಿಗೆ ಕನಕಪುರದ ಆಚೆಗೆ ಬೇರೇನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಹೀಗಾಗಿ ಅನ್ಯ ಜಿಲ್ಲೆಗಳ ಬಗ್ಗೆ ತಾತ್ಸಾರದ ಮಾತನಾಡುತ್ತಿದ್ದಾರೆ. ಈ ಹಿಂದೆ ಬೆಂಗಳೂರು ನಗರದ ಜನತೆಯ ಬಗ್ಗೆಯೂ ಹೀಗೆ ಮಾತನಾಡಿದ್ದರು. ಮಂಗಳೂರು ಸೇರಿದಂತೆ ಕರಾವಳಿಯ ಜನರು ಸ್ವಾಭಿಮಾನಿಗಳು. ಬೆಂಗಳೂರಿನ ನಂತರ ಅತಿಹೆಚ್ಚು ತೆರಿಗೆ ಸಂಗ್ರಹವಾಗುವುದು ಇಲ್ಲಿಂದಲೇ. ನಿಮ್ಮ ಗ್ಯಾರಂಟಿ ನಂಬಿ ಮತದಾನ ಮಾಡುವಂತ ಬೌದ್ಧಿಕ ದಾರಿದ್ರ‍್ಯ ನಮಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿಸಿ ಬಗ್ಗೆ ವಿವಾದಾತ್ಮಕ ಹೇಳಿಕೆ | ಕರ್ನಲ್ ಸೋಫಿಯಾ ವಿರುದ್ಧದ ಹೇಳಿಕೆಗೆ ಆದೇಶ ಗೊತ್ತಾ? – ರವಿಕುಮಾರ್‌ಗೆ ಹೈಕೋರ್ಟ್ ಚಾಟಿ

ನೀವು ಗ್ಯಾರಂಟಿ ಘೋಷಣೆ ಮಾಡುವಾಗ ಇದು ಮಂಗಳೂರಿಗೆ ಅನ್ವಯವಾಗುವುದಿಲ್ಲ ಎಂಬ ನಿಬಂಧನೆ ವಿಧಿಸಿದ್ದಿರೇ? ಗ್ಯಾರಂಟಿ ಜಾರಿಯಾದ ಮೇಲೆ ಮಂಗಳೂರಿನವರು ಅರ್ಜಿ ಸಲ್ಲಿಸಬಾರದು ಎಂದು ಕರಾರು ಹೇರಿದ್ದಿರೇ? ಮಂಗಳೂರು ಕರ್ನಾಟಕದ ಭಾಗವಾಗಿರುವುದರಿಂದ ಇಲ್ಲಿನ ಜನ ಅರ್ಜಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ನಿಮ್ಮ ಗ್ಯಾರಂಟಿ ಯೋಜನೆ ಕನಕಪುರದವರಿಗೆ ಮಾತ್ರ ಸೀಮಿತವಲ್ಲ. ರಾಜ್ಯದ ಕರದಾತರ ಹಣದಲ್ಲಿ ಅನುಷ್ಠಾನ ಮಾಡುತ್ತಿದ್ದೀರಿ. ಹೊಟ್ಟೆಬಟ್ಟೆ ಕಟ್ಟಿಯಾದರೂ ನೀವು ಇದನ್ನು ಅನುಷ್ಠಾನ ಮಾಡಬೇಕೆ ವಿನಾ ನಿಲ್ಲಿಸುವುದಕ್ಕೆ ಕಳ್ಳಮಾರ್ಗ ಹುಡುಕಬೇಡಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ – ಮೂವರು ಆರೋಪಿಗಳ ಬಂಧನ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಹದೆಗೆಡುತ್ತಿದೆ. ಇದಕ್ಕೆ ನಿಮ್ಮ ಓಲೈಕೆ ರಾಜಕಾರಣವೇ ಕಾರಣ. ಇದಕ್ಕಾಗಿಯೇ ಮಂಗಳೂರಿನ ಜನತೆ ನಿಮ್ಮನ್ನು ತಿರಸ್ಕರಿಸಿದ್ದಾರೆ. ನಾವು ಬೇಕಿದ್ದರೆ ಹೊಟ್ಟೆಬಟ್ಟೆ ಕಟ್ಟಿಯಾದರೂ ದುಡಿಯುತ್ತೇವೆ. ಆದರೆ ಕಾಂಗ್ರೆಸಿಗರ ಹಂಗು, ದಯಾ ಭಿಕ್ಷೆ ಬೇಕಿಲ್ಲ. ಇಂಥ ಕೀಳು ಅಭಿರುಚಿಯ ಹೇಳಿಕೆ ನೀಡಿ ಮಂಗಳೂರಿನವರ ಆತ್ಮಾಭಿಮಾನ ಕೆಣಕಬೇಡಿ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ