ವರ್ಕ್ ಫ್ರಂ ಹೋಮ್ ಸಾಕು, ಆಫೀಸಿಗೆ ಬನ್ನಿ ಎಂದಿದ್ದಕ್ಕೆ ಮಹಿಳಾ ಟೆಕ್ಕಿಗಳು ಸಾಮೂಹಿಕ ರಾಜೀನಾಮೆ!

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ (Corona Virus) ನಿಂದಾಗಿ ದೇಶಾದ್ಯಂತ ವರ್ಕ್ ಫ್ರಂ ಹೋಮ್ ಜಾರಿಗೆ ತರಲಾಗಿತ್ತು. ಇದೀಗ ಕಂಪನಿಯೊಂದು ವರ್ಕ್ ಫ್ರಂ ಹೋಂ ಸಾಕು, ಆಫೀಸಿಗೆ ಬಂದು ಕೆಲಸ ಮಾಡಿ ಎಂದು ಸೂಚನೆ ನೀಡಿದೆ. ಈ ಬೆನ್ನಲ್ಲೇ ಮಹಿಳಾ ಟೆಕ್ಕಿಗಳು (Women Techies) ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

ಹೌದು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯು ಆಫೀಸಿಗೆ ಬಂದು ಕೆಲಸ ಮಾಡುವಂತೆ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಕಳೆದ ಮೂರು ವರ್ಷಗಳಿಂದ ಮನೆಯಿಂದ ಕಲಸ ಮಾಡುತ್ತಿದ್ದೀರ. ಇನ್ಮೇಲೆ ಕಡ್ಡಾಯವಾಗಿ ಆಫೀಸಿಗೆ ಬಂದು ಕೆಲಸ ಮಾಡುವಂತೆ ಕಂಪನಿ ಹೇಳಿದೆ. ಈ ಸೂಚನೆ ಹೊರ ಬೀಳುತ್ತಿದ್ದಂತೆಯೇ ಮಹಿಳಾ ಟೆಕ್ಕಿಗಳು ಇಂತಹ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.

ಈ ಸಂಬಂಧ ಟಿಸಿಎಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಡ್ (Milind Lakkad) ಮಾತನಾಡಿ, ಕಂಪನಿಯು ಮನೆಯಿಂದಲೇ ಕೆಲಸ ಮಾಡಿದ್ದು ಸಾಕು, ಕಚೇರಿಗೆ ಬಂದು ಕಾರ್ಯ ನಿರ್ವಹಿಸಿ ಎಂದು ಹೇಳಿದ ನಂತರ ಅನೇಕ ಮಂದಿ ಉದ್ಯೋಗಿಗಳಿಂದ ರಾಜೀನಾಮೆ ಪತ್ರಗಳು ಬಂದವು. ಅದರಲ್ಲಿ ಹೆಚ್ಚಿನದ್ದು ಮಹಿಳೆಯರ ರಾಜೀನಾಮೆ ಪತ್ರಗಳೇ ಆಗಿವೆ. ಆದರೆ ಈ ಮಹಿಳಾ ಉದ್ಯೋಗಿಗಳ ರಾಜೀನಾಮೆ (Women Employees Resign) ಯು ತಾರತಮ್ಯದಿಂದ ಪ್ರೇರಿತವಾಗಿಲ್ಲ. ಸಾಮಾನ್ಯವಾಗಿ ಟಿಸಿಎಸ್ ಕಂಪನಿಯಲ್ಲಿ ಹಿಂದೆಲ್ಲ ಪುರುಷರಿಗಿಂತ ಮಹಿಳೆಯರು ರಾಜೀನಾಮೆ ನೀಡುವ ಪ್ರಮಾಣ ಕಡಿಮೆ ಇತ್ತು. ಆದರೆ ಈ ಬಾರಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆಗೆ ಬೇರೆ ಬೇರೆ ಕಾರಣಗಳಿರಬಹುದಾದರೂ ಪ್ರಮುಖ ಕಾರಣ ಮಾತ್ರ ವರ್ಕ್ ಫ್ರಂ ಹೋಮ್ (Work From Home) ರದ್ದತಿ ಎಂಬುದು ಹೇಳಿದ್ದಾರೆ.

ಟಿಸಿಎಸ್ ನಲ್ಲಿ 6,00,000 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಅದರಲ್ಲಿ 35% ಮಹಿಳಾ ಉದ್ಯೋಗಿಗಳಿದ್ದಾರೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಂಪನಿ ನಿಲ್ಲಿಸಿದ ನಂತರ ಮಹಿಳಾ ಟೆಕ್ಕಿಗಳು ಹೆಚ್ಚಾಗಿ ರಾಜೀನಾಮೆಗಳನ್ನು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: 1 ಷೇರಿನ ಬೆಲೆ 1 ಲಕ್ಷ – ಭಾರತದಲ್ಲಿ ದಾಖಲೆ ಬರೆದ ಎಂಆರ್‌ಎಫ್‌: ಯಾವ ವರ್ಷ ಎಷ್ಟಿತ್ತು?

ಒಟ್ಟಿನಲ್ಲಿ ಕೋವಿಡ್ ಕಾರಣಕ್ಕೆ ಉದ್ಯೋಗಿಗಳಿಗೆ ಪ್ರಪಂಚದಾದ್ಯಂತ ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡಲಾಗಿತ್ತು. ಹಲವು ಸಮೀಕ್ಷೆಗ ಪ್ರಕಾರ, ಈ ಸೌಲಭ್ಯದಿಂದಾಗಿ ಕೆಲಸದ ಔಟ್‍ಪು‌ಟ್ ಹೆಚ್ಚಾಗಿದೆ. ಕಂಪನಿಗಳಿಗೂ ಕೆಲವೊಂದಿಷ್ಟು ಆಡಳಿತಾತ್ಮಕ ವೆಚ್ಚ ತಗ್ಗಿದೆ ಎನ್ನಲಾಗಿತ್ತು. ಆದರೆ ಮನೆಯಿಂದ ಕೆಲಸ ಮಾಡಿದರೆ ತಂಡಗಳನ್ನು ನಿರ್ವಹಿಸುವುದು ಕಷ್ಟ ಎಂಬುದು ಕೆಲ ಕಂಪನಿಗಳ ಮ್ಯಾನೇಜ್ಮೆಂಟ್ ವಾದವಾಗಿತ್ತು. ಆದರೆ ಹೆಚ್ಚಿನ ಉದ್ಯೋಗಿಗಳು ಈಗಲೂ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನೇ ಇಷ್ಟಪಡುತ್ತಾ ಇದ್ದಾರಂತೆ. ಮ್ಯಾನೇಜ್ಮೆಂಟ್ ಬಲವಂತಕ್ಕೆ ಕಚೇರಿಗೆ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ.