ಜೂನ್ ತಿಂಗಳಿನಲ್ಲಿ ಮಾರುತಿ ಕಾರು ಮಾರಾಟ ಹೆಚ್ಚಳ: ಯಾವ ಕಾರು ಎಷ್ಟು ಮಾರಾಟವಾಗಿದೆ?

ಬೆಂಗಳೂರು: ಉತ್ತಮ ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಮೂಲಕ ಮತ್ತೊಮ್ಮೆ ಮಾರುತಿ ಸುಜುಕಿ ಕಾರು ಉತ್ಪಾದನಾ ಸಂಸ್ಥೆಯು ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ.

2018ರ ಜೂನ್ ತಿಂಗಳ ಮಾರಾಟದ ವರದಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 1,44,981 ಕಾರುಗಳನ್ನು ಮಾರಾಟ ಮಾಡಿ 36.3% ರಷ್ಟು ಮಾರಾಟವನ್ನು ಹೆಚ್ಚಿಸಿಕೊಂಡಿದೆ. ತನ್ನ ಇತ್ತೀಚಿನ ವರದಿಯಲ್ಲಿ ರಫ್ತು ಸೇರಿದಂತೆ ಒಟ್ಟು 1,44,981 ಕಾರುಗಳನ್ನು ಮಾರಿದ್ದ ಕಂಪೆನಿಯು 2017ರ ಜೂನ್ ತಿಂಗಳಲ್ಲಿ ಒಟ್ಟು 1,06,394ರಷ್ಟು ಮಾತ್ರ ಮಾರಿತ್ತು.

ವರದಿಯ ಪ್ರಕಾರ ಭಾರತದಲ್ಲಿ 2017 ಜೂನ್ ತಿಂಗಳಲ್ಲಿ ಒಟ್ಟು 93,263 ಕಾರುಗಳನ್ನು ಮಾರಿತ್ತು. ಆದರೆ ಇದೇ ವರ್ಷ ಜೂನ್ ತಿಂಗಳಲ್ಲಿ 1,35,662 ಮಾರಾಟ ಮಾಡಿದೆ.

ಆಲ್ಟೋ ಮತ್ತು ವ್ಯಾಗನ್ ಆರ್ ಮಾಡೆಲ್‍ಗಳು 2018ರಲ್ಲಿ 29,381 ಮಾರಾಟವಾಗಿದ್ದರೆ 2017ರಲ್ಲಿ 25,534ರಷ್ಟು ಮಾರಾಟವಾಗಿತ್ತು. ಸ್ವಿಫ್ಟ್, ಎಸ್ಟಿಲೋ, ಡಿಸೈರ್, ಬೆಲೆನೂ ಮಾಡೆಲ್‍ಗಳು 2018ರಲ್ಲಿ 71,570 ಮಾರಾಟವಾಗಿದ್ದರೆ 2017ರಲ್ಲಿ 40,496ರಷ್ಟು ಮಾರಾಟಗೊಂಡಿದ್ದವು.

ಸೆಡಾನ್ ಕಾರುಗಳು ವಿಭಾಗದಲ್ಲಿ ಸಿಯಾಜ್ ಕಾರ್ 2018ರಲ್ಲಿ 1,579 ಹಾಗೂ 2017ರಲ್ಲಿ 3,950ರಷ್ಟು ಮಾರಾಟಗೊಂಡಿದ್ದವು. ಎರ್ಟಿಗಾ, ಎಸ್-ಕ್ರಾಸ್, ಹಾಗೂ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಕಾರು ವಿಟಾರ ಬ್ರೇಜಾ 2018ರಲ್ಲಿ 19,321 ಹಾಗೂ 2017 ರಲ್ಲಿ 13,879ರಷ್ಟು ಸೇಲ್ ಆಗಿತ್ತು.

ವ್ಯಾನ್ ಕಾರುಗಳ ವಿಭಾಗದಲ್ಲಿ ಓಮಿನಿ ಹಾಗೂ ಇಕೋ ಮಾಡೆಲ್‍ಗಳು 2018ರಲ್ಲಿ 12,185 ಹಾಗೂ 2017ರಲ್ಲಿ 9,208ರಷ್ಟು ಮಾರಾಟವಾಗಿತ್ತು. 2017ನೇ ಹಾಗೂ 2018ನೇ ಜೂನ್ ತಿಂಗಳ ವರದಿ ಪ್ರಕಾರ ಮಾರುತಿ ಸುಜುಕಿ ಕಂಪನಿಯು ತನ್ನ ಮಾರಾಟವನ್ನು ಶೇ 36.3ರಷ್ಟನ್ನು ಹೆಚ್ಚಿಸಿಕೊಂಡಿದೆ.

ಮಾರುತಿ ಸುಜುಕಿ ಕಂಪನಿಯು ಕಳೆದ 37 ವರ್ಷಗಳಿಂದ ಜಪಾನ್ ಒಡೆತನದ ಸುಜುಕಿ ಕಂಪೆನಿಯೊಂದಿಗೆ ಸಹಭಾಗಿತ್ವದಲ್ಲಿ ಭಾರತದಲ್ಲಿ ಕಾರುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಭಾವವನ್ನು ಮಾರುತಿ ಸುಜುಕಿ ಸ್ವಲ್ಪ ಕಳೆದುಕೊಂಡಿತ್ತು. ಆದರೆ ಈಗ ತನ್ನ ನೂತನ ಆವೃತ್ತಿಯ ಕಾರುಗಳಿಂದ ಭಾರತದ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದೆ. ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

Comments

Leave a Reply

Your email address will not be published. Required fields are marked *