ಮಂಗಳವಾರ ಗುರು ತಿಥಿ ಕಾರ್ಯ – ನಾಡಿನ ಜನತೆಗೆ ಧನ್ಯವಾದ ತಿಳಿಸಿ ಭಾವುಕರಾದ ಕಲಾವತಿ

ಮಂಡ್ಯ: ಹುತಾತ್ಮ ಯೋಧ ಮಂಡ್ಯದ ಗುಡಿಗೆರೆ ಗ್ರಾಮದ ಗುರು ಅವರ ತಿಥಿ ಕಾರ್ಯ ಮಂಗಳವಾರ ನಡೆಯಲಿದ್ದು, ಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಾವು ಇದ್ದೇವೆ, ಏನೇ ತೊಂದರೆ ಆದರೂ ನಾವು ಸಹಾಯ ಮಾಡುತ್ತೇವೆ ಎಂದು ಧೈರ್ಯ ತುಂಬಿದ ಕನ್ನಡ ನಾಡಿನ ಜನತೆಗೆ ಗುರು ಅವರ ಪತ್ನಿ ಕಲಾವತಿ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.

ಹುತಾತ್ಮ ಯೋಧ ಗುರು ಅವರನ್ನು ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲೇ ಮಂಗಳವಾರ ತಿಥಿ ಕಾರ್ಯ ನಡೆಸಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ತಿಥಿ ಕಾರ್ಯದ ಸಂಪೂರ್ಣ ವೆಚ್ಚವನ್ನು ಮದ್ದೂರು ಕ್ಷೇತ್ರದ ಶಾಸಕ, ಸಾರಿಗೆ ಸಚಿವ ಡಿಸಿ ತಮ್ಮಣ್ಣ ವಹಿಸಿಕೊಂಡಿದ್ದಾರೆ.

ಗುರು ಅವರು ಹುತಾತ್ಮರಾದ ನಂತರ ಅವರ ಕುಟುಂಬ ತೀವ್ರ ಸಂಕಟದಿಂದ ಕಂಗಾಲಾಗಿತ್ತು. ಈ ವೇಳೆ ಅವರ ಬೆಂಬಲಕ್ಕೆ ನಿಂತ ದೇಶದ ವಿವಿಧ ಭಾಗದ ಜನರು ನೆರವಿನ ಹಸ್ತ ಚಾಚಿದರು. ಅವರ ಸಹಾಯವನ್ನು ನೆನೆದ ಗುರು ಅವರ ಕುಟುಂಬದವರು ಎಲ್ಲರಿಗೂ ಧನ್ಯವಾದ ತಿಳಿಸುತ್ತ ಭಾವುಕರಾಗಿದ್ದಾರೆ. ಗುರು ಅವರ ತಿಥಿ ಕಾರ್ಯಕ್ಕೆ ಪಾಲ್ಗೊಂಡು ಅವರ ಆತ್ಮಕ್ಕೆ ಶಾಂತಿ ಕೋರುವಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ಡಿ.ಸಿ ತಮ್ಮಣ್ಣ ಅವರು ಮಾತನಾಡಿ, “ಗುರು ನಮ್ಮ ಊರಿನ ಯೋಧ ಆಗಿರುವುದರಿಂದ ನಾನೇ ಖರ್ಚು ಭರಿಸುತ್ತೇನೆ. ನಮ್ಮ ಬೆಂಬಲಿಗರು ಕೂಡ ಎಲ್ಲ ಕಾರ್ಯದಲ್ಲೂ ಸಹಾಯ ಮಾಡುತ್ತಾರೆ. ಪುಣ್ಯಕಾರ್ಯದಂದು ಸುಮಾರು 4 ರಿಂದ 5 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಸಂಪ್ರದಾಯದಂತೆ ಏನೆಲ್ಲಾ ಊಟ ಮಾಡಬೇಕೆಂದು ನಿಗದಿ ಆಗಿಂದೆಯೋ ಎಲ್ಲವನ್ನೂ ಮಾಡುತ್ತೇವೆ. ಸದ್ಯದಲ್ಲೇ ಹುತಾತ್ಮ ಯೋಧ ಗುರು ಸ್ಮಾರಕ ಕೂಡ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *