ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

ರಾಂಚಿ: ಟಿ20 ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ದಾಖಲೆ ಭಾರತ ತಂಡದ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಲ್ಲಿತ್ತು. ಇದೀಗ ಈ ದಾಖಲೆಯನ್ನು ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಮುರಿದು ಟಿ20 ಕ್ರಿಕೆಟ್‍ನ ಕಿಂಗ್ ಆಗಿದ್ದಾರೆ.

ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 95 ಪಂದ್ಯಗಳಿಂದ 29 ಅರ್ಧಶತಕ ಸಹಿತ 3,227 ರನ್ ಸಿಡಿಸಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದರು. ಭಾರತ ಮತ್ತು ನ್ಯೂಜಿಲೆಂಡ್ ಸರಣಿಯಲ್ಲಿ ಮಾರ್ಟಿನ್ ಗುಪ್ಟಿಲ್ ಕೊಹ್ಲಿಯ ಈ ದಾಖಲೆಯನ್ನು ಮುರಿದು ನೂತನವಾಗಿ ಟಿ20 ಕ್ರಿಕೆಟ್‍ನ ಕಿಂಗ್ ಆಗಿದ್ದಾರೆ. ಗುಪ್ಟಿಲ್ 111 ಪಂದ್ಯಗಳಿಂದ 2 ಶತಕ, 19 ಅರ್ಧಶತಕ ಸಹಿತ 3,248 ರನ್ ಬಾರಿಸಿ ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ವಿಶ್ವದ ನಂ.1 ಆಟಗಾರರಾಗಿದ್ದಾರೆ. ಇದನ್ನೂ ಓದಿ: ರಾಹುಲ್‌, ರೋಹಿತ್‌ ಶತಕದ ಜೊತೆಯಾಟ- ಟಿ20 ಸರಣಿ ಗೆದ್ದ ಟೀಂ ಇಡಿಯಾ

ಗುಪ್ಟಿಲ್ ಮತ್ತು ಕೊಹ್ಲಿ ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ ಒಂದು ಮತ್ತು ಎರಡನೇ ಸ್ಥಾನ ಪಡೆದರೆ ಮೂರನೇ ಸ್ಥಾನದಲ್ಲಿ ಭಾರತ ಟಿ20 ತಂಡದ ನಾಯಕ ರೋಹಿತ್ ಶರ್ಮಾ ಇದ್ದಾರೆ. ರೋಹಿತ್ 118 ಪಂದ್ಯಗಳಿಂದ 4 ಶತಕ, 25 ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಕೊಹ್ಲಿಗಿಂತ 86 ರನ್‍ಗಳ ಹಿನ್ನಡೆಯಲ್ಲಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ಸರಣಿಯಲ್ಲಿ ಮಾರ್ಟಿನ್ ಗುಪ್ಟಿಲ್ ಆಡುತ್ತಿದ್ದರೆ, ವಿರಾಟ್ ಕೊಹ್ಲಿ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದ್ದು, ಇನ್ನೊಂದು ಪಂದ್ಯ ಬಾಕಿ ಇದೆ. ನಾಳೆ ಕೋಲ್ಕತ್ತಾದಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

Comments

Leave a Reply

Your email address will not be published. Required fields are marked *