ದೊಡ್ಮನೆಯಲ್ಲಿ ಮದ್ವೆ ಸಂಭ್ರಮ – ಹೂವುಗಳಿಂದ ವಿವಾಹ ಮಂಟಪ ಸಜ್ಜು

– ಆರತಕ್ಷತೆಯಲ್ಲಿ 60ಕ್ಕೂ ಹೆಚ್ಚು ತಿನಿಸು
– ಗೋಲ್ಡ್ ವೈಟ್ ರೆಡ್ ಥೀಮ್‍ನಲ್ಲಿ ವೇದಿಕೆ ರೆಡಿ

ಬೆಂಗಳೂರು: ದೊಡ್ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಟ ರಾಘವೇಂದ್ರ ರಾಜ್‍ಕುಮಾರ್ ಅವರ ಕಿರಿಯ ಪುತ್ರ ಯುವರಾಜ್ ಕುಮಾರ್ ಮದುವೆಗೆ ಬೆಂಗಳೂರು ಅರಮನೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.

ಕಳೆದ ಒಂದು ವಾರದಿಂದ ಮದುವೆಯ ಶಾಸ್ತ್ರಗಳು ಶುರುವಾಗಿದ್ದು, ಇಂದು ಸಂಜೆ ಬೆಂಗಳೂರು ಅರಮನೆಯಲ್ಲಿ ವರ ಪೂಜೆ ನಡೆಯಲಿದೆ. ಯುವ ರಾಜ್‍ಕುಮಾರ್ ಮೈಸೂರು ಮೂಲದ ಶ್ರೀದೇವಿಯನ್ನು ಕೈ ಹಿಡಿಯಲಿದ್ದು, ಭಾನುವಾರ ಬೆಳಗ್ಗೆ ಮುಹೂರ್ತ ಸಮಾರಂಭಕ್ಕೆ ಬೆಂಗಳೂರು ಅರಮನೆಯಲ್ಲಿ ತಯಾರಿ ಭರ್ಜರಿಯಾಗಿದೆ.

ಭಾನುವಾರ ಸಂಜೆ ಆರತಕ್ಷತೆ ನಡೆಯಲಿದ್ದು, ಆರತಕ್ಷತೆಯಲ್ಲಿ ಸ್ಯಾಂಡಲ್‍ವುಡ್, ಬಾಲಿವುಡ್ ಸೇರಿದಂತೆ ಟಾಲಿವುಡ್‍ನ ಸಾಕಷ್ಟು ಕಲಾವಿದರು ಭಾಗಿಯಾಗಲಿದ್ದಾರೆ. ಅದಷ್ಟೇ ಅಲ್ಲದೆ ರಾಜಕೀಯ ಗಣ್ಯರು ಕೂಡ ಮದುವೆಯಲ್ಲಿ ಭಾಗಿಯಾಗಿ ವಧು-ವರರನ್ನು ಆಶೀರ್ವದಿಸಲಿದ್ದಾರೆ.

ಯುವರಾಜ್ ಕುಮಾರ್ ವಿವಾಹಕ್ಕಾಗಿ ಗೋಲ್ಡ್ ವೈಟ್ ರೆಡ್ ಥೀಮ್‍ನಲ್ಲಿ ವೇದಿಕೆ ಸಜ್ಜಾಗಿದ್ದು ಸಾಕಷ್ಟು ಹೂವುಗಳಿಂದ ವಿವಾಹದ ಮಂಟಪವನ್ನು ಸಜ್ಜುಗೊಳಿಸಲಾಗುತ್ತಿದೆ. ಅಭಿಮಾನಿಗಳಿಗೆ ಮತ್ತು ವಿವಿಐಪಿಗಳಿಗೆ ಒಂದೇ ರೀತಿಯ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಗ್ಗೆ ಮುಹೂರ್ತದ ಸಂದರ್ಭಕ್ಕೆ 30ಕ್ಕೂ ಹೆಚ್ಚು ಖಾದ್ಯಗಳು ಹಾಗೂ ಆರತಕ್ಷತೆಯಲ್ಲಿ 60ಕ್ಕೂ ಹೆಚ್ಚು ತಿನಿಸುಗಳನ್ನು ಮದುವೆಗೆ ಬಂದವರು ಸವಿಯಬಹುದಾಗಿದೆ.

ಈ ಹಿಂದೆ ಶಿವರಾಜ್ ಕುಮಾರ್ ಮಗಳ ಮದುವೆ ಹಾಗೂ ರಾಕಿಂಗ್ ಸ್ಟಾರ್ ಯಶ್ ಮದುವೆ ತಯಾರಿಯನ್ನು ಮಾಡಿ ಕೊಟ್ಟಂತಹ ಧ್ರುವ ಡೆಕೋರೇಟ್ ಅವರೇ ಈ ಮದುವೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ರಾಜ್‍ಕುಮಾರ್ ಕಾಲದಿಂದಲೂ ದೊಡ್ಮನೆಯ ಕಾರ್ಯಕ್ರಮಗಳಲ್ಲಿ ಊಟದ ವ್ಯವಸ್ಥೆ ಮಾಡುತ್ತಿದ್ದ ಚನ್ನಕೇಶವ ಅವರೇ ಯುವ ರಾಜ್‍ಕುಮಾರ್ ಮದುವೆಯ ಊಟದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *