ಮದ್ವೆಗಾಗಿ ತಾಳಿ ಕದ್ದ ಪ್ರೇಮಿಗಳು – ಪೊಲೀಸರ ಅತಿಥಿಯಾದ್ರು ಅಪರೂಪದ ಜೋಡಿ

ಬೆಂಗಳೂರು: ಪ್ರೇಮಿಗಳು ಮದುವೆಗಾಗಿ ತಾಳಿ ಕಳ್ಳತನ ಮಾಡಿ ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನ ಚಂದ್ರಲೇಔಟ್‍ನಲ್ಲಿ ನಡೆದಿದೆ.

ಹರೀಶ್ ಮತ್ತು ಭೂಮಿಕಾ ಬೆಂಗಳೂರಿನ ದೊಡ್ಡ ಆಲದಮರದ ರಾಮೋಹಳ್ಳಿ ನಿವಾಸಿಗಳಾಗಿದ್ದು, ಕಳೆದ ಮೂರು ವರ್ಷಗಳಿಂದ ಒಬ್ಬರನೊಬ್ಬರು ಬಿಟ್ಟಿರದಷ್ಟು ಗಾಢವಾಗಿ ಪ್ರೀತಿಸುತ್ತಿದ್ದರು. ಹರೀಶ್ ಕೆಲಸಕ್ಕೆ ಸೇರಿ ನಂತರ ಭೂಮಿಕಾಳನ್ನು ಮದುವೆ ಆಗುವುದು ಎಂದು ಮಾತುಕತೆ ಆಗಿತ್ತು. ಆದರೆ ಅದು ಕೇವಲ ಮಾತಾಗಿ ಉಳಿಯಿತು. ಹರೀಶ್ ಕೆಲಸಕ್ಕೆ ಸೇರಿ ಸಂಪಾದನೆ ಮಾಡುವ ಬದಲಾಗಿ ತನ್ನ ಪ್ರೇಯಸಿ ಜೊತೆ ಸರಗಳ್ಳತನ ಮಾಡಲು ನಿರ್ಧರಿಸಿದ್ದನು.

ಮೊದ ಮೊದಲು ಮದುವೆ ಆಗುವುದಕ್ಕೆ ಸರಗಳ್ಳತನ ಶುರು ಮಾಡಿದ ಈ ಜೋಡಿ, ಕೊನೆಗೆ ಅದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡರು. ಅಲ್ಲದೆ ಮದುವೆಗೂ ಮುನ್ನವೇ ಸೆಟಲ್ ಆಗುವುದಕ್ಕೆ ನಿರ್ಧರಿಸಿದ್ದರು. ಹಾಗಾಗಿ ಅಡ್ರೆಸ್ ಕೇಳುವ ನೆಪದಲ್ಲಿ ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿ ಸರಕಸಿದು ಪರಾರಿಯಾಗುತ್ತಿದ್ದರು.

ಇದು ಮೊದಲಿಗೆ ತುಮಕೂರಿನಲ್ಲಿ ಪ್ರಾರಂಭವಾಗಿ ಕೊನೆಗೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ತಲುಪಿತ್ತು. ನಗರದ ಕುಂಬಳಗೋಡು, ಚಂದ್ರ ಲೇಔಟ್, ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಸರ ಕಸಿದು ಯಾರಿಗೂ ಅನುಮಾನ ಬರದಂತೆ ಪರಾರಿಯಾಗುತ್ತಿದ್ದರು. ಈ ಪ್ರಕರಣದ ಬೆನ್ನು ಬಿದ್ದ ಚಂದ್ರಲೇಔಟ್ ಪೊಲೀಸರಿಗೆ ಸಿಸಿಟಿವಿಯಲ್ಲಿ ಈ ಜೋಡಿಯ ತಾಳಿ ಭಾಗ್ಯದ ಕೈಚಳಕ ಸೆರೆಯಾಗಿತ್ತು. ಇದೇ ಸಿಸಿಟಿವಿ ಆಧಾರದ ಮೇಲೆ ತನಿಖೆ ನಡೆಸಿ ಕೊನೆಗೂ ಇಬ್ಬರನ್ನು ಬಲೆಗೆ ಹಾಕಿಕೊಂಡಿದ್ದಾರೆ.

ಈ ಬಗ್ಗೆ ಚಂದ್ರಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *