ಮದ್ವೆಯಾದ 3 ದಿನಕ್ಕೆ ಪತ್ನಿ 2 ತಿಂಗಳ ಗರ್ಭಿಣಿ – ಹೊಟ್ಟೆ ನೋವಿನಿಂದ ರಹಸ್ಯ ಬಯಲು

– ವಿವಾಹಕ್ಕೂ ಮುನ್ನ ಪ್ರಿಯಕರನೊಂದಿಗೆ ದೈಹಿಕ ಸಂಬಂಧ

ಲಕ್ನೋ: ಮದುವೆಯಾದ ಮೂರೇ ದಿನಕ್ಕೆ ತನ್ನ ಪತ್ನಿ ಗರ್ಭಿಣಿಯಾಗಿರುವ ವಿಚಾರ ತಿಳಿದು ಪತಿ ಶಾಕ್ ಆಗಿದ್ದಾನೆ. ಅಲ್ಲದೇ ತಾನು ಮೋಸ ಹೋಗಿದ್ದೇನೆಂದು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಏನಿದು ಪ್ರಕರಣ:
ಬುಲಂದ್‍ಶಹರ್ ಜಿಲ್ಲೆಯ ನೈಮಂಡಿ ಚೌಕಿ ಗ್ರಾಮದ ಯುವಕನೊಬ್ಬ ಫೆಬ್ರವರಿ 15 ರಂದು ಮದುವೆಯಾಗಿದ್ದನು. ವಿವಾಹವಾದ ಮೂರನೇ ದಿನಕ್ಕೆ ಪತ್ನಿ ಹೊಟ್ಟೆ ನೋವಿನಿಂದ ಬಳಲಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ 2 ತಿಂಗಳ ಗರ್ಭಿಣಿ ಎಂದು ತಿಳಿಸಿದ್ದರು. ಆಗ ಪತಿ ಮೂರು ದಿನದಲ್ಲಿ 2 ತಿಂಗಳ ಗರ್ಭಿಣಿಯಾಗಲು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಂಡಿದ್ದಾನೆ. ನಂತರ ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡಿದ್ದು, ನಡೆದ ಘಟನೆಯ ಬಗ್ಗೆ ಪತ್ನಿಯ ಬಳಿ ಪ್ರಶ್ನಿಸಿದ್ದಾನೆ. ಆಗ ಪತ್ನಿ ಸತ್ಯವನ್ನು ಬಾಯಿಬಿಟ್ಟಿದ್ದಾಳೆ.

ಯುವತಿ ಮದುವೆಗೂ ಮುನ್ನ ಬುಲಂದ್‍ಶಹರ್ ಜಿಲ್ಲೆಯ ಸಿಕಂದರಾಬಾದ್‍ನ ಅಲಿಘರ್ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಾಗಿ ತಿಳಿಸಿದ್ದಾಳೆ. ಅಲ್ಲದೇ ಪ್ರೀತಿ ಮಾಡುತ್ತಿದ್ದಾಗ ಇಬ್ಬರು ದೈಹಿಕ ಸಂಪರ್ಕ ಹೊಂದಿದ್ದಾಗಿ ಸತ್ಯ ಬಾಯಿಬಿಟ್ಟಿದ್ದಾಳೆ. ಆದರೆ ಮಗಳ ಪ್ರೀತಿಯ ಬಗ್ಗೆ ತಿಳಿದ ಪೋಷಕರು ಬೇರೆ ಹುಡುಗನನ್ನು ಮದುವೆಯಾಗುವಂತೆ ಒತ್ತಾಯಿಸಿ ಮದುವೆ ಮಾಡಿದ್ದರು. ಮದುವೆಯಾದ ಮೂರು ದಿನಕ್ಕೆ ಹೊಟ್ಟೆ ನೋವು ಬಂದ ಕಾರಣ ಯುವತಿ ಗರ್ಭಿಣಿ ಎಂಬ ಸತ್ಯಾಂಶ ಹೊರಬಂದಿತ್ತು.

ಸದ್ಯ ತಾನು ಮೋಸ ಹೋಗಿದ್ದನ್ನು ಅರಿತುಕೊಂಡ ಯುವಕ ನ್ಯಾಯಾಲಯದ ಮೊರೆ ಹೋಗಿದ್ದಾನೆ. ತನ್ನ ಪ್ರೇಮಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಬಳಿಕವೂ ಆಕೆ ನನ್ನನ್ನು ಮದುವೆಯಾಗಿದ್ದಾಳೆ. ಜೊತೆಗೆ ಆಕೆಯ ಕುಟುಂಬದವರು ಈ ವಿಚಾರವನ್ನು ಮುಚ್ಚಿಟ್ಟು ಮೋಸ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾನೆ. ಇತ್ತ ಯುವತಿ ತನ್ನ ಪ್ರಿಯಕರನ್ನು ಮದುವೆಯಾಗುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದು, ತನಗೆ ರಕ್ಷಣೆ ಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, ಸಮಸ್ಯೆ ಬಗೆಹರಿಯುವವರೆಗೂ ಆಕೆಗೆ ಜಿಲ್ಲಾ ಆಸ್ಪತ್ರೆಯ ಜ್ಯೋತಿ ಕೇಂದ್ರದಲ್ಲಿ ಆಶ್ರಯ ನೀಡುವಂತೆ ಆದೇಶಿಸಿದೆ.

Comments

Leave a Reply

Your email address will not be published. Required fields are marked *