ಭಾರತ ಹಿಂಸಾಚಾರವನ್ನು ಸಹಿಸಲ್ಲ, ಮುಸ್ಲಿಮ್ ಸಂಘಟನೆಯನ್ನು ಮನ್ ಕೀ ಬಾತ್‍ನಲ್ಲಿ ಹೊಗಳಿದ ಮೋದಿ

ನವದೆಹಲಿ: ಹರ್ಯಾಣ ಮತ್ತು ಪಂಚಕುಲಾದಲ್ಲಿ ನಡೆದ ಹಿಂಸಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಆಕಾಶವಾಣಿ ಕಾರ್ಯಕ್ರಮದಲ್ಲಿ ಖಂಡಿಸಿದ್ದಾರೆ.

ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದ ಬಗ್ಗೆ ನೇರವಾಗಿ ವಿಚಾರವನ್ನು ಪ್ರಸ್ತಾಪ ಮಾಡದ ಮೋದಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಅವರು ಯಾರು? ಒಂದು ಕಡೆ, ಉತ್ಸವ ಹರಡಿದ್ದರೆ ಇನ್ನೊಂದು ಕಡೆ ಹಿಂಸಾಚಾರ ಕೇಳಿ ಬರುತ್ತಿದೆ. ಭಾರತ ಬುದ್ಧ, ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಹುಟ್ಟಿದ ದೇಶವಾಗಿದ್ದು ಯಾವುದೇ ಹಿಂಸಾಚಾರವನ್ನು ಸಹಿಸುವುದಿಲ್ಲ. ನಂಬಿಕೆಯ ಹೆಸರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸುವ ಹಕ್ಕು ಯಾರಿಗೂ ಇಲ್ಲ. ಹಿಂಸಾಚಾರ ಸುದ್ದಿ ಬಂದರೆ ಹೆದರಿಕೆ ಆಗುವುದು ಸಹಜ ಎಂದು ಮೋದಿ ಹೇಳಿದರು.

ಗುಜರಾತ್‍ನಲ್ಲಿ ಪ್ರವಾಹದ ಸಮಯದಲ್ಲಿ ಇಸ್ಲಾಮಿಕ್ ಸಂಘಟನೆ ಜಮೈತ್ ಉಲೆಮಾ-ಇ-ಹಿಂದ್ ಕಾರ್ಯವನ್ನು ಹೊಗಳಿದ ಅವರು, ಭನಸ್ಕಾಂತ ಜಿಲ್ಲೆಯ ದನೇರದಲ್ಲಿ ನೆರೆಯಿಂದ ಹಾನಿಯಾಗಿದ್ದ 22 ದೇವಾಲಯ ಹಾಗೂ 2 ಮಸೀದಿಯನ್ನು ಈ ಸಂಘಟನೆಯ ಸದಸ್ಯರು ಶುದ್ಧೀಕರಿಸಿದರು. ಅವರು ಒಟ್ಟಾಗಿ ಬಂದು ಕೆಲಸ ಮುಗಿಸಿದ್ದಾರೆ. ಜಮೈತ್-ಉಲೆಮಾ-ಇ-ಹಿಂದ್‍ನ ಸ್ವಯಂ ಸೇವಕರು ಸ್ವಚ್ಛತೆಗಾಗಿ ಒಂದು ಒಳ್ಳೆ ಸ್ಪೂರ್ತಿದಾಯಕ ಉದಾಹರಣೆಯಾಗಿದ್ದಾರೆ ಎಂದು ಮೋದಿ ಶ್ಲಾಘಿಸಿದರು.

ಇದೇ ವೇಳೆ ಯುವ ಜನತೆ ಕ್ರೀಡೆಯತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದ ಮೋದಿ ಹಿಂದೆ ಹೇಗಿತ್ತು ಈಗ ಹೇಗೆ ಕುಟುಂಬ ಬದಲಾಗಿದೆ ಎನ್ನುವುದನ್ನು ವಿವರಿಸಿದರು. ಹಿಂದಿನ ದಿನಗಳಲ್ಲಿ ಕುಟುಂಬದ ಮಕ್ಕಳು ಆಟವಾಡಲು ಹೋದಾಗ ತಾಯಿ “ನೀನು ಯಾವಾಗ ಮರಳಿ ಮನೆಗೆ ಬರುತ್ತೀಯಾ” ಎಂದು ಪ್ರಶ್ನಿಸುತ್ತಿದ್ದಳು. ಆದರೆ ಈಗ, “ನೀನು ಯಾವಾಗ ಹೊರಗಡೆ ಹೋಗುತ್ತೀಯಾ” ಎಂದು ಪ್ರಶ್ನಿಸಿ ಬೈಯುತ್ತಾಳೆ. ಕಾಲ ಹೇಗೆ ಬದಲಾಗಿದೆ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

ಅಕ್ಟೋಬರ್ 2ಕ್ಕೆ ಸ್ವಚ್ಛ ಭಾರತ ಅಭಿಯಾನಕ್ಕೆ ಮೂರನೇ ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಈ ದಿನ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದ ಅಡಿಯಲ್ಲಿ ದೊಡ್ಡ ಅಂದೋಲವನ್ನು ಕೈಗೊಂಡು ಹತ್ತಿರದ ಪ್ರದೇಶಗಳನ್ನು ಭೇಟಿ ಮಾಡಿ ಸ್ವಚ್ಛ ಭಾರತದ ಬಗ್ಗೆ ಅರಿವು ಮೂಡಿಸೋಣ ಎಂದು ಜನರಲ್ಲಿ ಮನವಿ ಮಾಡಿದರು.

Comments

Leave a Reply

Your email address will not be published. Required fields are marked *