ಮಣಿಪುರದಲ್ಲಿ ಬಿರೇನ್‌ ಸರ್ಕಾರಕ್ಕೆ ಸಂಕಷ್ಟ – ಬಿಜೆಪಿಯ 37ರ ಪೈಕಿ 17 ಶಾಸಕರು ಸಭೆಗೆ ಗೈರು

ಇಂಫಾಲ: ಸಂಘರ್ಷಪೀಡಿತ ಮಣಿಪುರದಲ್ಲಿ (Manipura) ಬಿರೇನ್ ಸಿಂಗ್ ನೇತೃತ್ವದ ಎನ್‌ಡಿಎ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ (Biren Singh) ಅವರ ವಿರುದ್ಧವೇ ಪಕ್ಷದೊಳಗೆ ಅಸಮಾಧಾನ ಬಹಿರಂಗವಾಗಿಯೇ ಸ್ಫೋಟಗೊಂಡಿದೆ.

ಎನ್‌ಡಿಎಗೆ ನೀಡಿದ್ದ ಬೆಂಬಲವನ್ನು ಎನ್‌ಪಿಪಿ (NPP) ಹಿಂಪಡೆದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಲು ಸಿಎಂ ಬಿರೇನ್‌ ಸಿಂಗ್‌ ಕರೆದಿದ್ದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ 27 ಮಂದಿ ಹಾಜರಾಗಿದ್ದರೆ 19 ಮಂದಿ ಗೈರಾಗಿದ್ದರು. ಈ ಪೈಕಿ ಬಿಜೆಪಿಯ 37 ಶಾಸಕರ ಪೈಕಿ 17 ಮಂದಿ ಗೈರಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

19ರಲ್ಲಿ 7 ಶಾಸಕರು ವೈದ್ಯಕೀಯ ಕಾರಣ ಹೇಳಿ ಗೈರು ಹಾಜರಾದರೆ ಉಳಿದ 12 ಜನ ಹೇಳದೇ ಕೇಳದೇ ಗೈರು ಹಾಜರಾಗಿದ್ದಾರೆ. ಈಗ ಬಂದಿರುವ ಮಾಹಿತಿ ಪ್ರಕಾರ 7 ಮಂದಿ ಶಾಸಕರು ಮಣಿಪುರವನ್ನೇ ತೊರೆದಿದ್ದಾರೆ. ಸಭೆಗೆ ಗೈರಾಗಿದ್ದಕ್ಕೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಮಣಿಪುರ | ಉದ್ರಿಕ್ತರಿಗೆ ಹೆದರಿ ಬಂಕರ್‌ ನಿರ್ಮಿಸಿಕೊಂಡ ಸಚಿವ!

ಬಹಿರಂಗವಾಗಿಯೇ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಸರ್ಕಾರ ಉಳಿಯುತ್ತಾ? ಅಥವಾ ಮುಖ್ಯಮಂತ್ರಿ ಬದಲಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಬಿಜೆಪಿ ಹೈಕಮಾಂಡ್‌ ನಾಯಕರು ಇಲ್ಲಿಯವರೆಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಚುನಾವಣೆಯಲ್ಲಿ ಬ್ಯುಸಿ ಇದ್ದ ಕಾರಣ ಮಣಿಪುರ ಸರ್ಕಾರದ ವಿಚಾರಕ್ಕೆ ತಲೆ ಹಾಕಿರಲಿಲ್ಲ. ಇಂದು ಚುನಾವಣೆ ಮುಗಿದ ಬಳಿಕ ಬಿಜೆಪಿ ಹೈಕಮಾಂಡ್‌ ಮಣಿಪುರ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಸಿಎಂ ಬಿರೇನ್‌ ಸಿಂಗ್‌ ಕಾರ್ಯವೈಖರಿಗೆ ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ 10 ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಸಭೆಯಿಂದ ದೂರ ಉಳಿದಿದ್ದಾರೆ ಎಂದು ವರದಿಯಾಗಿದೆ.

ಒಟ್ಟು 60 ಮಂದಿ ಶಾಸಕರ ಬಲವನ್ನು ಹೊಂದಿರುವ ಮಣಿಪುರ ವಿಧಾನಸಭೆಯಲ್ಲಿ ಎನ್‌ಡಿಎ ಶಾಸಕರ ಸಂಖ್ಯೆ 46 ಇದೆ. ಈ ಪೈಕಿ ಬಿಜೆಪಿ 37, ನಾಗಾ ಪೀಪಲ್ಸ್‌ ಫ್ರಂಟ್‌ 5, ಮೂವರು ಪಕ್ಷೇತರರು, ಜೆಡಿಯು 1 ಸ್ಥಾನವನ್ನು ಹೊಂದಿದೆ.

14 ಸ್ಥಾನಗಳನ್ನು ವಿಪಕ್ಷಗಳು ಹೊಂದಿವೆ. ಎನ್‌ಪಿಪಿ 7, ಕಾಂಗ್ರೆಸ್‌ 5. ಕೆಪಿಎ 2 ಸ್ಥಾನವನ್ನು ಗಳಿಸಿದೆ. ಬಹುಮತಕ್ಕೆ 31 ಶಾಸಕರ ಸಂಖ್ಯೆ ಬೇಕಾಗಿರುವ ಕಾರಣ ಸದ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ.