ಇಂಫಾಲ: ಮಣಿಪುರದಲ್ಲಿ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ ವಿರುದ್ಧ ಹೋರಾಡಿದ್ದ ಇರೋಮ್ ಶರ್ಮಿಳಾ ತೌಬಾಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಓಕ್ರಮ್ ಇಬೋಬಿ ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಶರ್ಮಿಳಾ ಅವರಿಗೆ ಕೇವಲ 100 ಮತಗಳು ಬಿದ್ದಿವೆ ಎಂದು ವರದಿಯಾಗಿದೆ. ತೌಬಲ್ ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್‍ನ ಓಕ್ರಮ್ ಅವರಿಗೆ 15 ಸಾವಿರ ಮತಗಳು ಸಿಕ್ಕಿದ್ದು, ಕೊನೆಯ ಹಂತದ ಮತ ಎಣಿಕೆಯ ಅಂಕಿ ಅಂಶ ಹೊರಬೀಳುವುದು ಬಾಕಿ ಇದೆ.
ಸೇನಾ ಪಡೆಯ ವಿಶೇಷ ಅಧಿಕಾರ ಕಾಯ್ದೆಯ ವಿರುದ್ಧ 16 ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದ್ದ ಇರೋಮ್ ಶರ್ಮಿಳಾ ಕಳೆದ ವರ್ಷ ಆಗಸ್ಟ್‍ನಲ್ಲಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು. ನಂತರ ಪೀಪಲ್ಸ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್ ಎಂಬ ಹೊಸ ರಾಜಕೀಯ ಪಕ್ಷವನ್ನು ಇರೋಮ್ ಶರ್ಮಿಳಾ ಸ್ಥಾಪಿಸಿದ್ದರು.
ಶರ್ಮಿಳಾ ಅವರು ಖೌರೀ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದು ಇನ್ನೇನು ಕೆಲವೇ ಹೊತ್ತಿನಲ್ಲಿ ಫಲಿತಾಂಶ ಹೊರಬೀಳಲಿದೆ.
ಮಣಿಪುರದಲ್ಲಿ ಇತರೆ ಪಕ್ಷದವರು ಜನರ ಮತಗಳನ್ನ ಸೆಳೆಯಲು ಹಣ ಮತ್ತು ತೋಳ್ಬಲವನ್ನು ಬಳಸಿದ್ದಾರೆ. ಆದ್ದರಿಂದ ಫಲಿತಾಂಶದ ಬಗ್ಗೆ ನಿರಾಸೆಯಿರುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಸೋತರೂ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಅಂತ ಇಂದು ಬೆಳಿಗ್ಗೆ ಇರೋಮ್ ಶರ್ಮಿಳಾ ಹೇಳಿದ್ದರು.

Leave a Reply