ಫಲಿತಾಂಶಕ್ಕೂ ಮೊದಲು ಮಣಿಪುರದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಪ್ಲ್ಯಾನ್‌

ಇಂಫಾಲ್: ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ಪರಿಸ್ಥಿತಿ ತಲೆದೋರುವ ಸ್ಪಷ್ಟ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೂ ಸ್ಪಷ್ಟ ಬಹುಮತದಿಂದ ಹಿಂದಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್‌, ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರರನ್ನು ಒಟ್ಟುಗೂಡಿಸಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಕಾರ್ಯತಂತ್ರ ರೂಪಿಸಿದೆ.

ಮಣಿಪುರದಲ್ಲಿ ಸದ್ಯ ಬಿಜೆಪಿ 27, ಎನ್‌ಪಿಪಿ 12, ಕಾಂಗ್ರೆಸ್‌ 11, ಇತರರು 10 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ರಾಜ್ಯದಲ್ಲಿ ಒಟ್ಟು 60 ಸ್ಥಾನಗಳಿದ್ದು, ಬಹುಮತಕ್ಕೆ 31 ಸ್ಥಾನಗಳನ್ನು ಗೆಲ್ಲಬೇಕಿದೆ. ಆದರೆ ಫಲಿತಾಂಶವನ್ನು ಗಮನಿಸಿದರೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಫಲಿತಾಂಶಕ್ಕೂ ಮೊದಲು ಮಣಿಪುರದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಮುಂದಾಗಿದೆ.

2017ರಲ್ಲಿ ಇದೇ ರೀತಿ ಕಾಂಗ್ರೆಸ್‌ 28 ಸ್ಥಾನಗಳನ್ನು ಜಯಿಸಿತ್ತು. ಬಿಜೆಪಿ 21 ಹಾಗೂ ಇತರರು 11 ಸ್ಥಾನಗಳನ್ನು ಗೆದ್ದಿದ್ದವು. ಹೆಚ್ಚು ಸ್ಥಾನ ಗಳಿಸಿದ್ದರೂ ಕಾಂಗ್ರೆಸ್‌ಗೆ ಸರ್ಕಾರ ರಚಿಸುವ ಅವಕಾಶ ಕೈತಪ್ಪಿತ್ತು. ಪಕ್ಷೇತರರೊಂದಿಗೆ ಮೈತ್ರಿ ಸಾಧಿಸಿ ಬಿಜೆಪಿ ಸರ್ಕಾರವನ್ನು ರಚಿಸಿತ್ತು.

ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಸಿಗಲಿದೆ ಎಂದು ಸಮೀಕ್ಷೆಗಳು ತಿಳಿಸಿದ್ದವು. ಆದರೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದು ಕೆಲ ಸಮೀಕ್ಷೆಗಳು ನುಡಿದಿದ್ದ ಭವಿಷ್ಯ ನಿಜವಾಗುವ ಚಿತ್ರಣ ಫಲಿತಾಂಶದಿಂದ ಕಂಡುಬರುತ್ತಿದೆ.

Comments

Leave a Reply

Your email address will not be published. Required fields are marked *