ಮಂಗ್ಳೂರು ಗಲಭೆಗೆ ಮೊದಲೇ ಪ್ಲಾನ್- ಗೂಡ್ಸ್ ಆಟೋದಲ್ಲಿ ಕಲ್ಲು ತಂದಿದ್ದ ಪ್ರತಿಭಟನಾಕಾರರು

– ಗಲಭೆಗೆ ತಯಾರಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಂಗಳೂರು: ಜಿಲ್ಲೆಯಲ್ಲಿ ಗಲಭೆ ಮಾಡಲು ಪ್ರತಿಭಟನಾಕಾರರು ಮೊದಲೇ ಪ್ಲಾನ್ ಮಾಡಿದ್ದರು. ಗಲಭೆಗೂ ಮುನ್ನ ಗೂಡ್ಸ್ ಆಟೋದಲ್ಲಿ ಗೋಣಿಚೀಲಗಳಲ್ಲಿ ಕಲ್ಲುಗಳನ್ನು ತರೆಸಿಟ್ಟುಕೊಂಡಿದ್ದರು ಎನ್ನುವುದಕ್ಕೆ ಸಿಸಿಟಿವಿ ದೃಶ್ಯಾವಳಿವೊಂದು ಸಾಕ್ಷಿಯಾಗಿದೆ.

ಮಂಗಳೂರು ಗೊಲಿಬಾರ್ ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಪೊಲೀಸ್ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಆದರೆ ಈ ಗಲಭೆ ನಡೆಸಲು ಕೆಲ ಪ್ರತಿಭಟನಾಕಾರರ ಗುಂಪು ಮೊದಲೇ ಪ್ಲಾನ್ ಮಾಡಿಕೊಂಡಿತ್ತು. ಗಲಭೆಗೂ ಮುನ್ನ ಕೆಲ ಗುಂಪು ಗೂಡ್ಸ್ ಆಟೋದಲ್ಲಿ ಕಲ್ಲುಗಳನ್ನು ತರೆಸಿಕೊಂಡಿದ್ದರು. ಗೋಣಿಚೀಲಗಳಲ್ಲಿ ಈ ಕಲ್ಲುಗಳನ್ನು ತುಂಬಿಸಿಡಲಾಗಿತ್ತು. ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೆಲ ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಲಾರಂಭಿಸಿದ್ದರು. ಬಳಿಕ ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದರು. ಹೀಗಾಗಿ ಕೆಲವರು ಮೊದಲೇ ಗಲಭೆಗೆ ತಯಾರಿ ನಡೆಸಿಕೊಂಡೇ ಬಂದಿದ್ದರು ಎಂದು ಸಿಸಿಟಿವಿ ದೃಶ್ಯಗಳು ಬಯಲು ಮಾಡಿದೆ.

ಯುವಕರಿದ್ದ ಒಂದು ಗುಂಪು ಪ್ರತಿಭಟನೆ ವೇಳೆ ಗಲಭೆ ನಡೆಸಲೆಂದೆ ಕಲ್ಲು ತಂದು ಹಾಕಿದರೆ, ಇನ್ನೊಂದು ಗುಂಪು ಸಿಸಿಟಿವಿಗಳನ್ನು ಒಡೆದು ಹಾಕಿ ಗಲಭೆ ಮಾಡಲು ಯತ್ನಿಸಿದ ದೃಶ್ಯಗಳು ಕೂಡ ಲಭ್ಯವಾಗಿದೆ. ಕಲ್ಲು ತೂರಾಟ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪ್ರತಿಭಟನಾಕಾರರು ಒಡೆಯಲು ಯತ್ನಿಸಿರುವುದು, ಮನೆಗಳ ಮುಂದಿದ್ದ ಕ್ಯಾಮೆರಾಗಳನ್ನು ತಿರುಗಿಸಿ ಹೋಗಿರುವ ದೃಶ್ಯಗಳು ಸೆರೆಯಾಗಿವೆ. ಅಷ್ಟೇ ಅಲ್ಲದೆ ಪೊಲೀಸ್ ವ್ಯಾನ್ ಬರುವುದನ್ನು ಗಮನಿಸಿ ರಸ್ತೆಗೆ ಅಡ್ಡವಾಗಿ ಕಬ್ಬಿಣದ ಕಂಬಗಳನ್ನು ಹಾಕಿ ಓಡಿಹೋಗಿರುವ ದೃಶ್ಯಾವಳಿಗಳು ಕೂಡ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *