ರಾಹುಲ್‌ ವಿರುದ್ಧ ಹೇಳಿಕೆ – ಭರತ್‌ ಶೆಟ್ಟಿ ವಿರುದ್ಧ ಎಫ್‌ಐಆರ್‌, ವಿಚಾರಣೆಗೆ ಬರುವಂತೆ ನೋಟಿಸ್‌

ಮಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಬಗ್ಗೆ ಮಂಗಳೂರು (Mangaluru) ಉತ್ತರ ಕ್ಷೇತ್ರದ ಬಿಜೆಪಿ ಶಾಸಕ (BJP MLA) ಡಾ.ವೈ.ಭರತ್ ಶೆಟ್ಟಿ (Bharat Shetty) ವಿವಾದಾತ್ಮಕ ಹೇಳಿಕೆಗೆ ಎಫ್‌ಐಆರ್‌ ದಾಖಲಾಗಿದ್ದು, ಈಗ ವಿಚಾರಣೆಗ ಬರುವಂತೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಮೂರು ದಿನಗಳ ಒಳಗೆ ತನಿಖಾಧಿಕಾರಿ ಎದುರು ಹಾಜರಾಗಿ ವಿಚಾರಣೆ ಎದುರಿಸುವಂತೆ ಕಾವೂರು ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ಬೈಂದೂರು ನೋಟಿಸ್‌ ಜಾರಿ ಮಾಡಿದ್ದಾರೆ.

ಪಾಲಿಕೆ ಸದಸ್ಯ ಕಾಂಗ್ರೆಸ್‌ನ ಅನಿಲ್ ಕುಮಾರ್ ದೂರಿನ ಮೇಲೆ ಭರತ್‌ ಶೆಟ್ಟಿ ಮೇಲೆ ಭಾರತೀಯ ನ್ಯಾಯ ಸಂಹಿತೆಯ 351(3), 353 ಸೆಕ್ಷನ್ ಅಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಇದನ್ನೂ ಓದಿ: ಆದಾಯಕ್ಕಿಂತ ಹೆಚ್ಚು ಆಸ್ತಿ – ನಿವೃತ್ತ ಎಂಜಿನಿಯರ್‌ ಸೇರಿದಂತೆ 13 ಅಧಿಕಾರಿಗಳಿಗೆ ಲೋಕಾ ಶಾಕ್‌

ಮಂಗಳೂರಿನ ಕಾವೂರಿನಲ್ಲಿ ಸೋಮವಾರ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಭರತ್‌ ಶೆಟ್ಟಿ ರಾಹುಲ್‌ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು.

 

ಭರತ್‌ ಶೆಟ್ಟಿ ಹೇಳಿದ್ದೇನು?
ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್‌ ಗಾಂಧಿಗೆ ಪಾರ್ಲಿಮೆಂಟ್‌ ಒಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಬೇಕು. ಆಗ ಎಲ್ಲವೂ ಸರಿಹೋಗುತ್ತೆ. ಆಗ ಇದಕ್ಕೆ ಏಳೆಂಟು ಎಫ್‌ಐಆರ್ ದಾಖಲಾಗ್ತಿತ್ತು ಅಷ್ಟೇ. ಮಂಗಳೂರಿಗೆ ಬಂದ್ರೆ ನಾವೇ ಅದಕ್ಕೆ ವ್ಯವಸ್ಥೆ ಮಾಡುತ್ತೇವೆ.

ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದರು. ಆ ಹುಚ್ಚನಿಗೆ ಶಿವ 3ನೇ ಕಣ್ಣು ಬಿಟ್ಟರೇ ಸುಟ್ಟು ಬೂದಿಯಾಗ್ತಾನೆ ಅಂತ ಗೊತ್ತಿಲ್ಲ. ಅವರು ಹಿಂದೂ ವಿರೋಧಿ ನೀತಿಯನ್ನ ಅಳವಡಿಸಿಕೊಂಡಿದ್ದಾರೆ. ನಾವು ಅವನಿರಿಗೆ ಯಾವ ಶಬ್ದ ಪ್ರಯೋಗಿಸಬಹುದು ಅಂತ ನೋಡಿ? ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ. ಹಿಂದೂಗಳ ಬಗ್ಗೆ ಏನು ಮಾತನಾಡಿದ್ರೂ ಕೇಳ್ತಾರೆ ಎಂಬ ಭಾವನೆ ರಾಹುಲ್ ಗಾಂಧಿಗೆ ಇರಬಹುದು. ಅಲ್ಲಿ ಅವರು ಬೊಗಳಿದರೆ ಇಲ್ಲಿನ ನಾಯಕರು ಬಾಲ ಬಿಚ್ಚಲು ಶುರು ಮಾಡ್ತಾರೆ.

ರಾಹುಲ್‌ ಗಾಂಧಿ ಕೇರಳಕ್ಕೆ ಬಂದಾಗ ಸೆಕ್ಯುಲರ್, ತಮಿಳುನಾಡಿಗೆ ಹೋದಾಗ ನಾಸ್ತಿಕ ಆಗ್ತಾರೆ, ಗುಜರಾತ್ ಭಾಗಕ್ಕೆ ಹೋದಾಗ ಶಿವಭಕ್ತನಾಗುತ್ತಾರೆ. ಅಂತಹ ದೊಡ್ಡ ಹುಚ್ಚರು ಅವರು. 99 ಸೀಟು ಗೆದ್ದು ಏನೋ ಸಾಧನೆ ಮಾಡಿದ್ದೇವೆ ಅನ್ನೋ ತರ ಅವರು ಮಾತಾಡ್ತಾರೆ. ಶಿವಾಜಿ, ರಾಣಾ ಪ್ರತಾಪ್ ನಮ್ಮ ಸಮಾಜದಲ್ಲೇ ಹುಟ್ಟಿದವರು. ಎಲ್ಲಿ ಶಸ್ತ್ರಾಸ್ತ್ರ ತೆಗೆಯಬೇಕೋ ಅಲ್ಲಿ ತೆಗೆಯುತ್ತೇವೆ. ಶಸ್ತ್ರಾಸ್ತ್ರ ಪೂಜೆ ಮಾಡಿ ಉತ್ತರ ಕೊಡೋದಕ್ಕೂ ನಮಗೆ ಗೊತ್ತಿದೆ. ಪಾರ್ಲಿಮೆಂಟ್‌ಗೆ ಹೋಗಿ ಅವನ ಕೆನ್ನೆಗೆ ಕೊಟ್ಟರೇ ಆಗ ಅವರು ಸರಿಯಾಬಹುದು ಎಂದು ಎಚ್ಚರಿಕೆ ನೀಡಿದರು.