ಕಡಲ ತೀರದಲ್ಲಿ ಹಾರಿದ ಬೃಹತ್ ಸ್ವದೇಶಿ, ವಿದೇಶಿ ಗಾಳಿಪಟಗಳು

– ಜನಮನ ಸೆಳೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

ಮಂಗಳೂರು: ಬಾನಂಗಳದಲ್ಲಿ ರಂಗು ರಂಗಿನ ಬೃಹತ್ ಗಾಳಿಪಟಗಳ ಸ್ವಚ್ಛಂದ ಹಾರಾಟ, ಕಡಲ ದಡದಲ್ಲಿ ಸೂತ್ರದಾರನ ನಿಯಂತ್ರಣ. ಇದನ್ನು ನೋಡಿದ ವೀಕ್ಷಕರು ವಾವ್ ಎನ್ನುವ ಹರ್ಷೋದ್ಗಾರ. ಅರಬ್ಬಿ ಸಮುದ್ರದ ಕಿನಾರೆಯ ಪ್ರಶಾಂತ ವಾತಾವರಣ. ಇಳಿಸಂಜೆಯ ತಂಪಾದ ಗಾಳಿ ಕಡಲತಡಿಗೆ ಬಂದವರ ಮೈ ತಣಿಸಿದ್ರೆ ಬಾನಂಗಳದಲ್ಲಿ ಹಾರಾಡುತ್ತಿದ್ದ ಗಾಳಿಪಟಗಳು ಚಿತ್ತಾರ ಮೂಡಿಸುತ್ತಿದ್ದವು. ಇಂತಹ ಅದ್ಬುತ ದೃಶ್ಯ ಕಂಡುಬಂದಿದ್ದು ಮಂಗಳೂರಿನ ಪಣಂಬೂರು ಕಡಲಕಿನಾರೆಯಲ್ಲಿ.

ಕರಾವಳಿ ಉತ್ಸವದ ಪ್ರಯುಕ್ತ ಮಂಗಳೂರಿನಲ್ಲಿ ಪಣಂಬೂರಿನ ಸುಂದರ ಕಡಲ ಕಿನಾರೆಯಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆದಿದೆ. ಅಮೆರಿಕ, ಥೈಲ್ಯಾಂಡ್, ನೆದರ್‍ಲ್ಯಾಂಡ್, ಚೀನಾ ಸೇರಿದಂತೆ ಆರು ದೇಶಗಳ ಹೆಸರಾಂತ 17 ಜನ ಗಾಳಿಪಟ ಕ್ರೀಡಾಪಟುಗಳು ಮಂಗಳೂರಿನ ಬಾನಿನಲ್ಲಿ ಅತ್ಯಾಕರ್ಷಕ ಚಿತ್ತಾರ ಮೂಡಿಸಿದ್ದಾರೆ. ವಿದೇಶಿಗರು ಸೇರಿದಂತೆ ದೇಶದ 25ಕ್ಕೂ ಹೆಚ್ಚಿನ ಗಾಳಿಪಟ ಕ್ರೀಡಾಪಟುಗಳು ಭಾಗವಹಿಸಿ ಗಾಳಿಪಟ ಉತ್ಸವದ ಮೆರಗು ಹೆಚ್ಚಿಸಿದರು.

ವಿಭಿನ್ನ ಶೈಲಿಯ ಗಾಳಿಪಟಗಳು:
ಹನುಮಂತನ ಬೃಹತ್ ಏರೋಫೋಯಿಲ್ ಗಾಳಿಪಟ, ಕುದುರೆ, ಮೊಸಳೆ, ವಿವಿಧ ಬಗೆಯ ಸಮುದ್ರ ಜೀವಿಗಳು, ಕೆಲವು ಹಣ್ಣು-ಹಂಪಲು ಮಾದರಿಯ ಗಾಳಿಪಟಗಳು ಸಮುದ್ರ ತೀರದ ನೀಲಿಯ ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತ ಹಕ್ಕಿಗಳಾದವು. ಸುಯ್ಯನೆ ಗಾಳಿಯಲ್ಲಿ ಚುರುಕಾಗಿ ಓಡಾಡುವ ಭಾರೀ ಉದ್ದದ ಹಾವಿನಾಕಾರದ ಗಾಳಿಪಟವಂತೂ ನೋಡುಗರನ್ನು ಮೈನವಿರೇಳಿಸುತ್ತಾ ಸೆಳೆಯುತ್ತಿತ್ತು. ಚಿತ್ರ ವಿಚಿತ್ರ ಬಗೆಯ ಗಾಳಿಪಟಗಳನ್ನು ಹಾರಿಸಿ ಕರಾವಳಿಯ ಜನರನ್ನು ವಿದೇಶಿಗರು ಆಕರ್ಷಿಸಿದರು.

ಒಟ್ಟಿನಲ್ಲಿ ಸಮುದ್ರ ತೀರಕ್ಕೆ ಸಂಜೆಯ ತಣ್ಣನೆಯ ಗಾಳಿ ಸವಿದು ಸೂರ್ಯಾಸ್ತಮಾನ ನೋಡಲು ಬಂದವರಿಗೆ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಉತ್ತಮ ಮನೋರಂಜನೆ ನೀಡಿತು.

Comments

Leave a Reply

Your email address will not be published. Required fields are marked *