ಮದುವೆಗೂ ತಟ್ಟಿದ ಕೊರೊನಾ ವೈರಸ್

– ಹಾಂಕಾಂಗ್‍ನಲ್ಲೇ ಉಳಿದ ವರ

ಮಂಗಳೂರು: ಮದುವೆಗೂ ಕೊರೊನಾ ವೈರಸ್ ತಟ್ಟಿದ್ದು, ಇದರಿಂದಾಗಿ ಮಂಗಳೂರು ತಾಲೂಕಿನ ಕುಂಪಲ ಮದುವೆ ಮುಂದೂಡಲಾಗಿದೆ.

ಸ್ಟಾರ್ ಕ್ರೂಝ್ ಪ್ರವಾಸಿ ಹಡಗಿನ ಸಿಬ್ಬಂದಿಯಾಗಿರುವ ಗೌರವ್ ಅವರ ಮದುವೆ ಸೋಮವಾರ ನಿಗದಿಯಾಗಿತ್ತು. ಫೆ. 10ಕ್ಕೆ ಗೌರವ್ ಅವರ ಮದುವೆ ನಿಶ್ಚಯವಾಗಿತ್ತು. ಮದುವೆಗಾಗಿ ಗೌರವ್ ಫೆ. 4ರಂದು ಮಂಗಳೂರಿಗೆ ಆಗಮಿಸಬೇಕಿತ್ತು. ಹಡಗಿನಲ್ಲಿರುವ ಹಲವರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಶಂಕಿಸಲಾಗುತ್ತಿದೆ. ಹಾಗಾಗಿ ಕ್ರೂಝ್ ಅನ್ನು ತಟಕ್ಕೆ ತರಲು ನಿರ್ಬಂಧ ಹೇರಲಾಗಿದೆ. ಹಾಂಕಾಂಗ್ ಸಮುದ್ರದಲ್ಲೇ ಕ್ರೂಝ್‍ಗೆ ದಿಗ್ಬಂಧನ ಮಾಡಲಾಗಿದೆ.

ಹಾಂಕಾಂಗ್, ಸಿಂಗಾಪುರ, ಥೈವಾನ್ ನಡುವೆ ಸಂಚರಿಸುವ ಹಡಗಿನಲ್ಲಿ ಒಟ್ಟು 1,700 ಪ್ರಯಾಣಿಕರಿದ್ದಾರೆ. ಹಡಗಿನಲ್ಲಿರುವ ಹಲವರಿಗೆ ಕೊರೊನಾ ವೈರಸ್ ತಗುಲಿದೆ. ಹಾಗಾಗಿ ಕ್ರೂಝ್ ಅನ್ನು ತಡೆ ಹಿಡಿಯಲಾಗಿದೆ. ಹಡಗನ್ನು ತಡೆ ಹಿಡಿದ ಕಾರಣ ಮದುಮಗ ಹಾಂಗ್ ಕಾಂಗ್ ನಲ್ಲೇ ಉಳಿದಿದ್ದಾರೆ. ಇದನ್ನೂ ಓದಿ: ಕಾರವಾರದ ಯುವಕನಿಗೆ ದಿಗ್ಭಂಧನ – ಪೋಷಕರು ಜಿಲ್ಲಾಡಳಿತದ ಮೊರೆ

ಈ ಬಗ್ಗೆ ಪ್ರತಿಕ್ರಿಯಿಸಿದ ಗೌರವ್ ಕುಟುಂಬಸ್ಥರು, 6 ತಿಂಗಳ ಹಿಂದೆಯೇ ಗೌರವ್ ಮದುವೆ ನಿಗದಿ ಮಾಡಿದ್ದೆವು. ಜ. 26ರಂದು ಗೌರವ್ ಮಂಗಳೂರಿಗೆ ಬರಬೇಕಿತ್ತು. ಆದರೆ ಕೊರೊನಾ ವೈರಸ್ ಹರಿಡಿದ್ದ ಕಾರಣ ಜ. 28ಕ್ಕೆ ಗೌರವ್‍ರನ್ನು ಕಳುಹಿಸುತ್ತೇವೆ ಎಂದು ಹೇಳಿದ್ದರು. ಮತ್ತೆ ಜ. 28ರಿಂದ ಫೆ. 6ಕ್ಕೆ ಕಳುಹಿಸುತ್ತೇವೆ ಎಂದು ಟಿಕೆಟ್ ಕೈಯಲ್ಲಿ ಕೊಟ್ಟಿದ್ದರು. ಸ್ಟಾರ್ ಕ್ರೂಝ್ ನಮಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಆದರೆ ಅಲ್ಲಿನ ಸರ್ಕಾರ ಕಳುಹಿಸುತ್ತಿಲ್ಲ. ಸರ್ಕಾರ ಹೇಳುವುದನ್ನು ಕ್ರೂಸ್ ಸಿಬ್ಬಂದಿ ಕೇಳಲೇಬೇಕು ಎಂದರು.

ಗೌರವ್ ಪ್ರತಿದಿನ ನಾಲ್ಕು ಬಾರಿ ಕರೆ ಮಾಡಿ ಮಾತನಾಡುತ್ತಾರೆ. ಯಾರಿಗೂ ವೈರಸ್ ಅಟ್ಯಾಕ್ ಆಗಲಿಲ್ಲ. ನಾಲ್ಕು ಬಾರಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ನಾಲ್ಕು ಬಾರಿಯೂ ಎಲ್ಲಾ ಪರೀಕ್ಷೆಗಳಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ. ಇಂದು ಮೆಹೆಂದಿ ಕಾರ್ಯಕ್ರಮ ನಡೆಯಬೇಕಿತ್ತು. ಸೋಮವಾರ 9 ಗಂಟೆಗೆ ಮದುವೆ ಮುಹೂರ್ತ ನಿಗದಿಪಡಿಸಲಾಗಿತ್ತು. ಆದರೆ ಈಗ ಅನಿವಾರ್ಯ ಕಾರಣಗಳಿಂದ ಅದನ್ನು ಕ್ಯಾನ್ಸಲ್ ಮಾಡಲಾಗಿದೆ. ಹುಡುಗಿ ಕಡೆಯವರ ಜೊತೆ ಮಾತನಾಡಿದ್ದು, ಇಬ್ಬರ ಕುಟುಂಬದವರು ಗೌರವ್ ಸುರಕ್ಷಿತವಾಗಿ ಬರಲಿ ಎಂದು ಬೇಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *