ಶಾಂತವಾಗಿರೋ ಮಂಗ್ಳೂರನ್ನು ಮತ್ತೆ ಕೆಣಕಿದ್ದಾರೆ- ಹೆಚ್‍ಡಿಕೆ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಶಾಂತವಾಗಿರುವ ರಾಜ್ಯ ಮತ್ತು ಮಂಗಳೂರನ್ನು ಮತ್ತೆ ಕೆಣಕಿದ್ದಾರೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿಯವರು ಹರಿಹಾಯ್ದಿದ್ದಾರೆ.

ಇಂದು ಕುಮಾರಸ್ವಾಮಿಯವರಿಂದ ಮಂಗಳೂರು ವೀಡಿಯೋ ಬಿಡುಗಡೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತಾಡಿದ ಅವರು, ಸಿಡಿ ಬಿಡುಗಡೆ ಮೂಲಕ ಕುಮಾರಸ್ವಾಮಿ ಬೇಜವಾಬ್ದಾರಿಯ ನಡವಳಿಕೆ ತೋರಿದ್ದಾರೆ. ಪೊಲೀಸರು ಗಲಭೆ ಮಾಡಲ್ಲ, ಗಲಭೆ ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಇದೇ ಪೋಲಿಸರಿದ್ದರು. ಪೊಲೀಸರನ್ನು ತಪ್ಪಿತಸ್ಥರನ್ನಾಗಿ ಮಾಡೋದು ಸರಿಯಿಲ್ಲ. ಪೊಲೀಸರ ಕಡೆ ಬೊಟ್ಟು ತೋರಿಸಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ವಿಡಿಯೋ ಸಮರ್ಪಕವಾಗಿಲ್ಲ, ಸರಿಯಿಲ್ಲ. ವಿಡಿಯೋದಲ್ಲಿ ಹಿಂದೆ ಇರೋದು ಮುಂದೆ, ಮುಂದೆ ಇರೋದು ಹಿಂದೆ ಹಾಕಿ ತೋರಿಸಿದ್ದಾರೆ. ಜನ ಸೇರಿದಾಗ, ಕಲ್ಲು ಎಸೆದಾಗ ಲಾಠಿ ಚಾರ್ಜ್ ಆಗಿದೆ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ದಾಳಿ ಮಾಡಲು ಮುಂದಾದಾಗ ಗೋಲಿಬಾರ್ ಆಗಿದೆ. ಈಗ ಕುಮಾರಸ್ವಾಮಿ ಘಟನೆಯನ್ನು ತಿರುಚಿ ಹೇಳಲು ಮುಂದಾಗಿದ್ದಾರೆ ಎಂದು ಹೆಚ್‍ಡಿಕೆ ವಿರುದ್ಧ ಕಿಡಿಕಾರಿದ್ರು. ಇದನ್ನೂ ಓದಿ: ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್‍ಡಿಕೆ

ಕುಮಾರಸ್ವಾಮಿ ಅವರು ತಮ್ಮ ವೀಡಿಯೋವನ್ನು ಮ್ಯಾಜಿಸ್ಟ್ರಿಯಲ್ ತನಿಖೆ ಮಾಡುತ್ತಿರುವವರಿಗೆ ಕೊಡಲಿ. ನಾನೂ ಕೂಡ ಆ ವೀಡಿಯೋಗಳ ಪರಿಶೀಲಿಸಿ ಅಂತ ಡಿಸಿಗೆ ಹೇಳಿದ್ದೇನೆ. ಕುಮಾರಸ್ವಾಮಿ ಅವರು ಈಗ ಜನರಲ್ಲಿ ಗೊಂದಲ ಎಬ್ಬಿಸುತ್ತಿರೋದು ಸರಿಯಲ್ಲ. ಕುಮಾರಸ್ವಾಮಿ ಪೊಲೀಸರೇ ಪ್ರಚೋದನೆ ಕೊಟ್ರು ಅಂದಿದ್ದಾರೆ. ಇದು ತಪ್ಪು, ಬೇಜವಾಬ್ದಾರಿಯ ಹೇಳಿಕೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಲ್ಲೆಲ್ಲಿ ಗಲಭೆ ಆಯ್ತು, ಏನೇನಾಯ್ತು ಅಂತ ಎಲ್ರಿಗೂ ಗೊತ್ತು. ಮತ್ತಷ್ಟು ವೀಡಿಯೋ ಇದೆ ಅಂತಲೂ ಅವರು ಅಂದಿದ್ದಾರೆ. ಅವುಗಳನ್ನು ಸಹ ಕುಮಾರಸ್ವಾಮಿ ಬಿಡುಗಡೆ ಮಾಡಲಿ. ಒಬ್ಬ ಮಾಜಿ ಮುಖ್ಯಮಂತ್ರಿ ಹೀಗೆ ನಡೆದುಕೊಳ್ಳೋದು ಸರಿಯಿಲ್ಲ ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *