ಮಂಗ್ಳೂರು ಆಸ್ಪತ್ರೆಯಿಂದ ಪರಾರಿಯಾಗಿ ಹೈಡ್ರಾಮ ಸೃಷ್ಟಿಸಿದ್ದವನಿಗೆ ಇಲ್ಲ ಕೊರೊನಾ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್‍ಲಾಕ್‍ನಿಂದ ಪರಾರಿಯಾಗಿ ಹೈಡ್ರಾಮ ಮಾಡಿದ್ದ ಕರೊನಾ ಶಂಕಿತನ ವರದಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕೈಸೇರಿದೆ. ರಿಪೋರ್ಟ್‍ನಲ್ಲಿ ಕರೊನಾ ನೆಗೆಟಿವ್ ಅಂಶ ಕಂಡುಬಂದಿದ್ದು ಜಿಲ್ಲಾಡಳಿತ ಮತ್ತು ಶಂಕಿತನ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಮಾರ್ಚ್ 8ರಂದು ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ವ್ಯಕ್ತಿಯಲ್ಲಿ ಕರೊನಾದ ಲಕ್ಷಣ ಕಂಡುಬಂದಿತ್ತು. ವೆನ್‍ಲಾಕ್ ಆಸ್ಪತ್ರೆಯ ಐಶೋಲೇಷನ್ ವಾರ್ಡ್ ಗೆ ಚಿಕಿತ್ಸೆಗೆಂದು ಸೇರಿಸಿದ್ದ ಬಳಿಕ ಆತ ಪರಾರಿಯಾಗಿದ್ದ. ಆ ಬಳಿಕ ಆರೋಗ್ಯಾಧಿಕಾರಿಗಳು ಆತನನ್ನು ಆತನ ಪತ್ನಿಯ ಮನೆಯಲ್ಲಿ ಪತ್ತೆ ಹಚ್ಚಿ ಆತನ ಗಂಟಲಿನ ದ್ರವದ ಮಾದರಿ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಇದೀಗ ಆತ ಸೇರಿದಂತೆ ಒಟ್ಟು 7 ಜನರ ವರದಿ ಬಂದಿದ್ದು ಎಲ್ಲರ ವರದಿಯಲ್ಲಿಯೂ ನೆಗೆಟಿವ್ ಅಂಶ ಕಂಡು ಬಂದಿದೆ. ಆದರೆ 14 ದಿನ ಜಾಗರೂಕತೆಯಿಂದ ಇರಲು ಸೂಚಿಸಿದ್ದೇವೆ. ಇಲ್ಲಿಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮಾಹಿತಿ ನೀಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು ಅಂಬುಲೆನ್ಸ್ ರೆಡಿ ಇದೆ. ಓರ್ವ ಡಾಕ್ಟರ್, ಇಬ್ಬರು ಅಸಿಸ್ಟೆಂಟ್ ಗಳು ಕರ್ತವ್ಯದಲ್ಲಿದ್ದಾರೆ. ವಿದೇಶದಿಂದ ಬರುವ ವಿಮಾನಗಳ ಬಗ್ಗೆ ನಿಗಾ ಇಡಲಾಗುತ್ತಿದೆ. ವಿಮಾನ ನಿಲ್ದಾಣ, ಪಣಂಬೂರು ಎನ್‍ಎಂಪಿಟಿ ಬಂದರಿನಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *