ಮಂಗ್ಳೂರಲ್ಲಿ ಕರ್ಫ್ಯೂ ತೆರವು, ಶಾಲಾ-ಕಾಲೇಜು ಓಪನ್- ಕಡಲನಗರಿಗೆ ಸಿದ್ದು ಭೇಟಿ

ಮಂಗಳೂರು: ನಗರದಲ್ಲಿ ಕರ್ಫ್ಯೂ ತೆರವು ಮಾಡಲಾಗಿದ್ದು, ಕರಾವಳಿ ಜನ ಈಗ ಕೊಂಚ ನಿರಾಳರಾಗಿದ್ದಾರೆ. ಮಂಗಳೂರು ಸದ್ಯ ಸಹಜ ಸ್ಥಿತಿಗೆ ಮರಳಿದೆ. ಶಾಲಾ-ಕಾಲೇಜುಗಳು ಇಂದಿನಿಂದ ಓಪನ್ ಆಗುತ್ತಿದೆ. ಇದರ ನಡುವೆ ಸಿದ್ದರಾಮಯ್ಯ ಇಂದು ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.

ಹಿಂಸಾಚಾರ, ಗೋಲಿಬಾರ್‍ನಿಂದ ಕಂಗೆಟ್ಟಿದ್ದ ಕಡಲನಗರಿ ಮಂಗಳೂರು ಈಗ ಶಾಂತವಾಗಿದೆ. ನಗರದಲ್ಲಿ ಬೆಳಗ್ಗೆ 6 ಗಂಟೆಗೆ ಕರ್ಫ್ಯೂ ಮುಕ್ತಾಯವಾಗಿದೆ. ಹಾಗಾಗಿ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ 144 ಸೆಕ್ಷನ್ ಮುಂದುವರಿದಿದೆ.

ಕರ್ಫ್ಯೂ ತೆರವಿನಿಂದ ಇಂದಿನಿಂದ ಎಂದಿನಂತೆ ಶಾಲಾ-ಕಾಲೇಜುಗಳು ಆರಂಭವಾಗಲಿದೆ. ಎಲ್ಲಾ ಸರ್ಕಾರಿ, ಖಾಸಗಿ ಕಚೇರಿಗಳೂ ತೆರೆದುಕೊಳ್ಳಲಿವೆ. ಕರ್ಫ್ಯೂ ಸಡಿಲಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಜನ ಮಾರುಕಟ್ಟೆಯತ್ತ ಆಗಮಿಸುತ್ತಿದ್ದಾರೆ. ಮಾತ್ರವಲ್ಲದೇ ಕರ್ಫ್ಯೂನಿಂದಾಗಿ ಮಂಗಳೂರಲ್ಲೇ ಸಿಲುಕಿಕೊಂಡಿದ್ದ ಮಂದಿ ಇಂದು ತಮ್ಮ ತಮ್ಮ ಊರುಗಳಿಗೆ ಸೇಫಾಗಿ ತೆರಳಿದರು.

ಇತ್ತ ಶುಕ್ರವಾರ ಮಂಗಳೂರಿಗೆ ತೆರಳಬೇಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಅವಕಾಶ ಸಿಕ್ಕಿರಲಿಲ್ಲ. ಕರ್ಫ್ಯೂ ಹಿನ್ನೆಲೆ ರಮೇಶ್ ಕುಮಾರ್ ನೇತೃತ್ವದ ನಿಯೋಗಕ್ಕೆ ತಡೆಯೊಡ್ಡಲಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಕೂಡ ತೆರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದು, ಮೃತರ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ.

ಮಂಗಳೂರಿನಲ್ಲಿ ಈಗಾಗಲೇ ಇಂಟರ್ನೆಟ್ ಇದ್ದು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ಸಭೆ, ಪ್ರತಿಭಟನೆ ನಿಷಿದ್ಧವಾಗಿದೆ. ಒಟ್ಟಿನಲ್ಲಿ ಮಂಗಳೂರಲ್ಲಿ ಗುಂಡೇಟಿಗೆ ಇಬ್ಬರು ಬಲಿಯಾದ ಬಳಿಕ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಎಲ್ಲವೂ ಎಂದಿನಂತೆ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *