ಸಿದ್ಧಾರ್ಥ್ ಮೃತದೇಹ ಪತ್ತೆ ಮಾಡಿದ ಮೀನುಗಾರ ಹೇಳಿದ್ದೇನು?

ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಸ್ಥಳೀಯ ಮೀನುಗಾರ ರಿತೇಶ್ ಎಂಬವರು ಅನುಮಾನದ ಮೇರೆಗೆ ಡೆಡ್ ಬಾಡಿಯನ್ನು ದಡಕ್ಕೆ ತಂದಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮೀನು ಹಿಡಿಯುವ ಕಾರ್ಯದಲ್ಲಿದ್ದೆವು. ಹೀಗೆ ಹೋಗುವಾಗ ನದಿ ಮಧ್ಯದಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂತು ಎಂದರು.

ಮೀನು ಹಿಡಿಯಲು ಮೂವರು ದೋಣಿಯಲ್ಲಿ ಹೋಗುತ್ತಿದ್ದೆವು. ಮೃತದೇಹ ತೇಲುತ್ತಿರುವುದನ್ನು ಕಂಡು ಇದು ಸಿದ್ಧಾರ್ಥ್ ಅವರದ್ದೇ ಆಗಿರಬಹುದೆಂದು ಅನುಮಾನದಲ್ಲಿ ದೋಣಿಯ ಬದಿಯಲ್ಲಿ ಶವವನ್ನು ಹಿಡಿದುಕೊಂಡು ದಡಕ್ಕೆ ತಂದಿದ್ದೇವೆ. ಆ ನಂತರ ಪೊಲೀಸರಿಗೆ ತಿಳಿಸಿದ್ದೇವೆ. ತಕ್ಷಣವೇ ರೌಂಡ್ಸ್ ನಲ್ಲಿರುವ ಪೊಲೀಸರಿಬ್ಬರು ಬಂದರು. ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಅವರೆಲ್ಲ ಬಂದಿದ್ದಾರೆ ಎಂದು ರಿತೇಶ್ ತಿಳಿಸಿದ್ದಾರೆ.

ನದಿಗೆ ಹಾರಿದ್ದಾರೆ ಎಂಬ ಸ್ಥಳದಿಂದ ಮೃತದೇಹ ಸಿಕ್ಕಿದ ಜಾಗಕ್ಕೆ ಸುಮಾರು 4-5 ಕಿ.ಮೀ ದೂರವಿದೆ. ಅಲ್ಲಿ ಮೃತದೇಹ ಸಿಕ್ಕಿದೆ. ನಿನ್ನೆ ಮೀನುಗಾರಿಕಾ ಸಂಸ್ಥೆಯಿಂದ ಕರೆ ಬಂದಿತ್ತು. ಸ್ಥಳೀಯರಾಗಿರುವ ನಮಗೆ ಶೋಧ ಕಾರ್ಯ ಮಾಡಬೇಕೆಂಬ ಸೂಚನೆ ನೀಡಲಾಗಿತ್ತು. ಹೀಗಾಗಿ 4 ದೋಣಿಗಳ ಮೂಲಕ ತೆರಳಿ ನಿನ್ನೆ ಹುಡುಕಾಡಿದ್ದೇವೆ ಅಂದರು.

ಅವರು ಹಾರಿದ ಭಾಗದಲ್ಲಿ 20-25 ಅಡಿ ಆಳವಿದ್ದು, ಮೃತದೇಹ ಸಿಕ್ಕಿದ ಭಾಗದಲ್ಲಿ 5-6 ಅಡಿ ಆಳವಿರಬಹುದು. ನೀರಿನೊಳಗೆ ಬಿದ್ದ ದೇಹ 18-24 ಗಂಟೆ ಮೇಲೆ ಬರಲು ಬೇಕಾಗುತ್ತದೆ ಎಂಬುದು ನಮ್ಮ ಅಂದಾಜು. ಇಷ್ಟು ಗಂಟೆಯ ಬಳಿಕ ಮೃತದೇಹ ಊದಿಕೊಳ್ಳುತ್ತದೆ. ಹೀಗಾಗಿ ಅದು ನೀರಿನಿಂದ ಮೇಲೆ ಬರುತ್ತವೆ. ಸಿದ್ದಾರ್ಥ್ ಅವರನ್ನು ಪತ್ತೆ ಹಚ್ಚಿದ್ದಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಶಾಸಕ ಯು.ಟಿ ಖಾದರ್ ಅವರು ನಮಗೆ ಧನ್ಯವಾದ ತಿಳಿಸಿದ್ದಾರೆ ಎಂದರು.

ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ. ಮೃತದೇಹವನ್ನು ನಗರದ ವೆನ್ ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

Comments

Leave a Reply

Your email address will not be published. Required fields are marked *