ಮಂಗಳೂರು-ಬೆಂಗಳೂರು 1 ವಿಮಾನ ಟಿಕೆಟ್ ದರ 16 ಸಾವಿರಕ್ಕೆ ಏರಿಕೆ

ಮಂಗಳೂರು: ಮಳೆಯಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕಿಸುವ ಹೆದ್ದಾರಿಗಳೆಲ್ಲಾ ಮುಚ್ಚಿ ಹೋಗಿವೆ. ಹೀಗಾಗಿ ತುರ್ತು ಸಂಪರ್ಕಕ್ಕೆ ಏಕೈಕ ದಾರಿಯಾಗಿರುವ ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚಿದ ಹಿನ್ನೆಲೆ ವಿಮಾನಯಾನ ಕಂಪನಿಗಳು ಈಗ ಪ್ರಯಾಣಿಕರನ್ನು ಸುಲಿಗೆ ಮಾಡಲಾರಂಭಿಸಿದೆ.

ಹೌದು. ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿದ್ದರೆ, ಮೈಸೂರು ಬಂಟ್ವಾಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕುಶಾಲನಗರದ ಕೊಪ್ಪದಲ್ಲಿ ಕಾವೇರಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.

ಇತ್ತ ಭಾರೀ ಮಳೆಗೆ ಹಳಿಗಳ ಮೇಲೆ ನೀರು ನಿಂತಿರುವ ಕಾರಣಕ್ಕೆ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಹೀಗಾಗಿ ಮಂಗಳೂರಿನಿಂದ ಬೆಂಗಳೂರು ತೆರೆಳಲು ಜನರು ವಿಮಾನಯಾನದ ಮೊರೆಹೋಗಿದ್ದಾರೆ. ಹೆಚ್ಚು ಹೆಚ್ಚು ಮಂದಿ ವಿಮಾನಗಳಲ್ಲಿ ತೆರಳುತ್ತಿರುವ ಕಾರಣಕ್ಕೆ ವಿಮಾನಯಾನ ಕಂಪನಿಗಳು ಈಗ ಪ್ರಯಾಣಿಕರನ್ನು ಸುಲಿಗೆ ಮಾಡಲಾರಂಭಿಸಿದೆ. ಸಾಮಾನ್ಯ ದಿನಗಳಲ್ಲಿ ಮಂಗಳೂರು – ಬೆಂಗಳೂರು ಪ್ರಯಾಣಕ್ಕೆ ಕೇವಲ 2 ಸಾವಿರ ರೂ. ಟಿಕೆಟ್ ದರ ಇರುತ್ತದೆ. ಆದರೆ ಭಾನುವಾರ ಟಿಕೆಟ್ ದರ 16 ಸಾವಿರಕ್ಕೆ ಏರಿಕೆ ಮಾಡಲಾಗಿತ್ತು.

ಇಂಡಿಗೋ ಮತ್ತು ಸ್ಪೈಸ್ ಜೆಟ್ ಕಂಪನಿಗಳಿಂದ ಮಂಗಳೂರಿನಿಂದ ಬೆಂಗಳೂರಿಗೆ ದಿನದಲ್ಲಿ ನಾಲ್ಕು ಬಾರಿ ವಿಮಾನ ಸಂಚಾರದ ವ್ಯವಸ್ಥೆಯಿದೆ. ರಸ್ತೆ ಹಾಗೂ ರೈಲು ಮಾರ್ಗ ಬಂದ್ ಆಗಿರುವ ಹಿನ್ನೆಲೆ ವಿಮಾನಯಾನಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವಿಮಾನ ಟಿಕೆಟ್ ದರವನ್ನು ಕಂಪನಿಗಳು ವಿಪರೀತವಾಗಿ ಏರಿಕೆ ಮಾಡಿದೆ. ಒಂದೆಡೆ ಪ್ರವಾಹದಿಂದ ಸಂತ್ರಸ್ತರಿಗೆ ರಾಜ್ಯದೆಲ್ಲೆಡೆ ದೇಣಿಗೆ ಸಂಗ್ರಹಿಸುತ್ತಿರುವ ಹೊತ್ತಲ್ಲಿ ವಿಮಾನ ಕಂಪನಿಗಳು ಪ್ರಯಾಣಿಕರ ಸುಲಿಗೆ ಮಾಡುತ್ತಿರುವುದು ಸರಿಯಲ್ಲವೆಂದು ಪ್ರಯಾಣಿಕರು ಕಿಡಿಕಾರಿದ್ದಾರೆ.

ಮಂಗಳೂರು- ಬೆಂಗಳೂರು ವಿಮಾನ ಟಿಕೆಟ್ ದರ ಒಬ್ಬರಿಗೆ ಎಷ್ಟು?
ಸಾಮಾನ್ಯ ದಿನಗಳಲ್ಲಿ 2,280 ರೂ. ಇದ್ದರೆ, ಶುಕ್ರವಾರದಂದು 9,715 ರೂಪಾಯಿಂದ 53,600 ರೂ. ಏರಿಕೆಯಾಗಿತ್ತು. ಆಗಸ್ಟ್ 11ರ ಏರ್ ಇಂಡಿಯಾ ಟಿಕೆಟ್ ದರ 14,600 ರೂಪಾಯಿಂದ 15,596 ರೂ., ಇಂಡಿಗೋ ಟಿಕೆಟ್ ದರ 17,599 ರೂ. ಇದೆ. ಆಗಸ್ಟ್ 12ರ ಏರ್ ಇಂಡಿಯಾ ಟಿಕೆಟ್ ದರ 18,851 ರೂ., ಇಂಡಿಗೋ 10,673 ರೂ., ಸ್ಪೈಸ್ ಜೆಟ್ 10,214 ರೂ. ನಿಗದಿಗೊಳಿಸಲಾಗಿದೆ.

https://www.facebook.com/yeshwanth.kadri/posts/10158767011494937

Comments

Leave a Reply

Your email address will not be published. Required fields are marked *