ಮಂಗಳೂರು: ನಾಡು ನುಡಿಯನ್ನು ಅನಾವರಣಗೊಳಿಸುವ ಆಳ್ವಾಸ್ ನುಡಿಸಿರಿ ಎಲ್ಲರಿಗೂ ಗೊತ್ತು. ಅಲ್ಲಿನ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮ, ಕಲಾಪ್ರಕಾರಗಳ ಪ್ರದರ್ಶನಗಳು ಗೊತ್ತು. ಆದರೆ ಅಲ್ಲಿ ಕೃಷಿ ಪ್ರಪಂಚದ ವೈವಿಧ್ಯವೂ ಅನಾವರಣಗೊಳ್ಳುತ್ತಿದೆ ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿ ಗಮನ ಸೆಳೆಯುವ ಅಂಶ ಅಂದ್ರೆ, ತರಕಾರಿ ಕೃಷಿಗಳ ವೈವಿಧ್ಯ.
ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ ಈಗೆಲ್ಲ ವೈವಿಧ್ಯತೆಗೆ ತೆರೆದುಕೊಳ್ಳುತ್ತಿದೆ. ಆಧುನಿಕ ಜೀವನದಲ್ಲಿ ಮರೆಯಾಗುತ್ತಿರುವ ಕೃಷಿ ಲೋಕದ ಪರಂಪರೆಯನ್ನೂ ಪರಿಚಯಿಸುವ ಯತ್ನ ನುಡಿಸಿರಿಯಲ್ಲಾಗುತ್ತಿದೆ. ಯಾವುದೋ ದೊಡ್ಡ ಮಟ್ಟಿನ ಕೃಷಿಕರು ನೆಟ್ಟ ತೋಟಗಾರಿಕೆ ಹೇಳುವ ಹಾಗೆ ಅಲ್ಲಿ ಬೆಂಡೆ, ತೊಂಡೆಯಿಂದ ತೊಡಗಿ ಹಾಗಲ, ಪಡುವಲ, ಸೋರೆ, ಹೀರೆ, ಬದನೆ, ಚೀನಿಕಾಯಿ ಹೀಗೆ ಬಹುತೇಕ ಎಲ್ಲಾ ಬಗೆಯ ತರಕಾರಿಗಳನ್ನು ಬೆಳೆಯಲಾಗಿದೆ. ನೋಡಲು ಬಂದವರಿಗೆ ಅಚ್ಚರಿಯೋ ಅಚ್ಚರಿ. ಹೀಗೂ ತರಕಾರಿ ಬೆಳೆಯುತ್ತಾ ಅಂತ ಉದ್ಘಾರ ಎತ್ತಿದ್ದರು. ಯಾಕಂದ್ರೆ, ಒಂದು ಕಾಲೇಜು ಕ್ಯಾಂಪಸ್ ನಲ್ಲಿ 6 ಎಕ್ರೆ ಜಾಗದಲ್ಲಿ ಬೆಳೆದು ನಿಂತ ತರಕಾರಿ ಕೃಷಿಯದು. 10ಕ್ಕೂ ಹೆಚ್ಚು ಕಾರ್ಮಿಕರು ಕಳೆದ ಎರಡು ತಿಂಗಳಿಂದ ಮಾಡಿದ ಶ್ರಮದ ಫಲವಿದು.

ರಾಜ್ಯದ ಉದ್ದಗಲದಿಂದ ಬಂದಿದ್ದವರಂತೂ ಈ ತರಹದ ತರಕಾರಿ ನೋಡಿಯೇ ಇಲ್ಲ ಅನ್ನುತ್ತಿದ್ದರು. ಒಂದ್ಕಡೆ ತರಕಾರಿ ಬೆಳೆದಿದ್ದರೆ, ಇನ್ನೊಂದ್ಕಡೆ ಹಲವು ಬಗೆಯ ಹೂವುಗಳೂ ಅರಳಿ ನಿಂತಿದ್ದವು. ಮತ್ತೊಂದ್ಕಡೆ ಕೃಷಿ ಪರಿಕರಗಳನ್ನೂ ಪ್ರದರ್ಶನಕ್ಕಿಡಲಾಗಿತ್ತು. ರಾಜ್ಯದ ಬೇರೆ ಬೇರೆ ಕಡೆಯಿಂದ ಬಂದಿದ್ದ ಕೃಷಿ ಪರಿಕರಗಳ ಮಾರಾಟಗಾರರಿಗೂ ಒಂದೇ ವೇದಿಕೆ ಸಿಕ್ಕಿದ್ದು ವಿಶೇಷವಾಗಿತ್ತು.
ತರಕಾರಿ ಕೃಷಿಯನ್ನೇ ನೋಡಿರದ ಕಾಲೇಜು ಮಕ್ಕಳಿಗಂತೂ ಕೃಷಿ ಸಿರಿ ಅದ್ಭುತ ಅನುಭವ ನೀಡಿತ್ತು. ಊರಲ್ಲಿ ತರಕಾರಿ, ಕೃಷಿ ಇದ್ದರೂ, ಹೇಗೆ ಇವನ್ನು ಬೆಳೆಯುವುದು ಅನ್ನುವುದು ಗೊತ್ತಿರಲಿಲ್ಲ. ಇಷ್ಟೊಂದು ವೆರೈಟಿಯ ಕೃಷಿಯನ್ನು ನೋಡುವುದೇ ಕಣ್ಣಿಗೆ ಹಬ್ಬ ಅಂತಾ ವಿದ್ಯಾರ್ಥಿಗಳು ಹೇಳುತ್ತಿದ್ದರು.

ಸಾಹಿತ್ಯ ಜಾತ್ರೆಯ ನುಡಿಸಿರಿ ಯಾವತ್ತಿನದ್ದೇ ಆಗಿದ್ದರೂ, ಕೃಷಿ ಲೋಕದ ಅನಾವರಣ ನುಡಿಸಿರಿಗೆ ಬಂದವರಿಗೆಲ್ಲ ವಿಭಿನ್ನ ಅನುಭವ ನೀಡಿದೆ. ಪ್ರತಿ ಕಾಲೇಜು ಕ್ಯಾಂಪಸ್ ಗಳಲ್ಲಿಯೂ ಇಂಥದ್ದೇ ಕೃಷಿ ಚಟುವಟಿಕೆಗೆ ಪ್ರೇರಣೆ ನೀಡುವಂತಾಗಬೇಕು ಎಂಬ ಆಶಯವೂ ಕೇಳಿಬಂದಿದೆ. ಒಟ್ಟಿನಲ್ಲಿ ಈ ಬಾರಿಯ ನುಡಿಸಿರಿಯಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದೇ ಕೃಷಿ ಪ್ರಪಂಚ ಅನ್ನುವುದರಲ್ಲಿ ಎರಡು ಮಾತಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply