ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೂವರೆ ಕೆಜಿ ಚಿನ್ನ ವಶ

– ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ

ಮಂಗಳೂರು: ದುಬೈನಿಂದ ಮಂಗಳೂರಿಗೆ ಬರುವ ಕೆಲವರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಪ್ರಕರಣ ಪದೇ ಪದೇ ಬೆಳಕಿಗೆ ಬರುತ್ತಿದ್ದು, ಮತ್ತೆ ಈ ಅಕ್ರಮ ಚಿನ್ನ ಸಾಗಾಟ ಮುಂದುವರೆದಿದೆ.

ಮೂರು ಬೇರೆ ಬೇರೆ ಪ್ರಕರಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದೂವರೆ ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಚಿನ್ನದ ಒಟ್ಟು ಮೌಲ್ಯವು 63.73 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ದುಬೈನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಈ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ವಿಮಾನದಲ್ಲಿದ್ದ ಪ್ರಯಾಣಿಕನಿಂದ 336.7 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 13.43 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇನ್ನೋರ್ವ ಪ್ರಯಾಣಿಕನಿಂದ 21.24 ಲಕ್ಷ ರೂ. ಮೌಲ್ಯದ 523 ಗ್ರಾಂ ಚಿನ್ನ ಹಾಗೂ ಮತ್ತೋರ್ವ ಪ್ರಯಾಣಿಕನಿಂದ 29.06 ಲಕ್ಷ ರೂ. ಮೌಲ್ಯದ 716 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಈ ಚಿನ್ನ ಸಾಗಾಟ ಬೆಳಕಿಗೆ ಬಂದಿದ್ದು, ಮೂವರನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಬಜಪೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬಂಧಿತ ಮೂವರೂ ಕೇರಳ ಮೂಲದವರಾಗಿದ್ದು, ಈ ಹಿಂದಿನಿಂದಲೂ ಇದೇ ರೀತಿ ಅಕ್ರಮ ಚಿನ್ನ ಸಾಗಾಟದಲ್ಲಿ ಸಿಕ್ಕಿ ಬಿದ್ದವರು ಕೇರಳ ಮೂಲದವರೇ ಎನ್ನುವುದು ವಿಶೇಷವಾಗಿದೆ.

Comments

Leave a Reply

Your email address will not be published. Required fields are marked *