ಬಾಂಬ್ ಸ್ಫೋಟಿಸಿದ್ದು ಹೇಗೆ? ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಏನಾಯ್ತು? – ಇಲ್ಲಿದೆ ಪೂರ್ಣ ವಿವರ

ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ 10 ಕೆಜಿ ತೂಕವುಳ್ಳ ಸಜೀವ ಬಾಂಬ್ ಅನ್ನು ಸ್ಫೋಟಿಸುವ ಮೂಲಕವೇ ನಿಷ್ಕ್ರಿಯಗೊಳಿಸಲಾಯ್ತು. ಬಾಂಬ್ ಸ್ಫೋಟಗೊಂಡ ಬಳಿಕ ಕಡಿಮೆ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಬಹುತೇಕ ಸಣ್ಣ ಪ್ರಮಾಣ ಸ್ಫೋಟಕ ವಸ್ತು ಇತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದ್ರೆ 12 ಅಡಿ ಆಳದಲ್ಲಿ ಬಾಂಬ್ ಸ್ಫೋಟಿಸಿರುವದರಿಂದ ಅದರ ತೀವ್ರತೆ ಅಷ್ಟಾಗಿ ಕಾಣಿಸಿಕೊಂಡಿಲ್ಲ.

ಒಂದು ವೇಳೆ ವಿಮಾನ ನಿಲ್ದಾಣ ಅಥವಾ ಬಯಲಿನಲ್ಲಿ ಈ ಬಾಂಬ್ ಸ್ಫೋಟಗೊಂಡಿದ್ದರೆ ಸುಮಾರು 500 ಮೀಟರ್ ವ್ಯಾಪ್ತಿಯ ಪ್ರದೇಶ ಹಾನಿ ಆಗುವ ಸಾಧ್ಯತೆಗಳಿದ್ದವು. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ 12 ಅಡಿ ಆಳದಲ್ಲಿರಿಸಿ ಸ್ಫೋಟಿಸಿದೆ.

ಮಧ್ಯಾಹ್ನದ ಬಳಿಕ 2 ಕಿಲೋಮೀಟರ್ ದೂರದಲ್ಲಿರುವ ಕೆಂಜಾರು ಮೈದಾನಕ್ಕೆ ಬಾಂಬ್ ಪ್ರತಿರೋಧಕ ವಾಹನವನ್ನು ಎಚ್ಚರಿಕೆಯಿಂದ ಸಾಗಿಸಲಾಗಿತ್ತು. 2 ಗಂಟೆ ನಿರಂತರ ಪ್ರಯತ್ನ ಮಾಡಿದ್ರೂ ಕೂಡ ಬಾಂಬ್ ನಿಷ್ಕ್ರಿಯಗೊಳಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಇದು ಸಾಧ್ಯವಾಗದಿದ್ದಾಗ ಸಂಜೆಯ ಹೊತ್ತಿಗೆ 12 ಅಡಿ ಆಳದ ಗುಂಡಿಯಲ್ಲಿ ಮರಳು ಚೀಲಗಳನ್ನು ಇಟ್ಟು ಅದರ ಮಧ್ಯೆ ಬಾಂಬ್ ಇರಿಸಿ, ರಿಮೋಟ್ ಮೂಲಕ ಸ್ಫೋಟಿಸಲಾಯ್ತು. ಇದರೊಂದಿಗೆ ಮಂಗಳೂರು ಸೇರಿ ಇಡೀ ರಾಜ್ಯದ ಜನತೆ ನಿಟ್ಟುಸಿರು ಬಿಟ್ಟರು. ಇದರ ಜೊತೆಗೆ ವಿಮಾನ ನಿಲ್ದಾಣದಲ್ಲಿ ಮತ್ತೆರಡು ಬಾಂಬ್ ಇರಿಸಲಾಗಿದೆ ಎಂಬ ಹುಸಿ ಕರೆಯಿಂದ ಆತಂಕ ಎದುರಾಗಿತ್ತು. ಒಂದು ವಿಮಾನದ ಹಾರಾಟ ಕೂಡ ಕ್ಯಾನ್ಸಲ್ ಆಯ್ತು. ಬೆಳಗ್ಗೆಯಿಂದ ಏನೇನಾಯ್ತು ಎಂಬುದರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

* ಬೆಳಗ್ಗೆ 8.45 – ಬಜ್ಪೆ ಏರ್ ಪೋರ್ಟ್‍ಗೆ ಆಟೋದಲ್ಲಿ ಬಂದ ಅಪರಿಚಿತ
(ಮಂಗಳೂರಿನಿಂದ ಖಾಸಗಿ ಬಸ್‍ನಲ್ಲಿ, ಕೆಂಜಾರು ಬಸ್ ನಿಲ್ದಾಣದಿಂದ ಆಟೋದಲ್ಲಿ ಪಯಣ)
* ಬೆಳಗ್ಗೆ 9.00 – ಟಿಕೆಟ್ ಕೌಂಟರ್ ಬಳಿ ಬಾಂಬ್ ಇದ್ದ ಲ್ಯಾಪ್‍ಟಾಪ್ ಬ್ಯಾಗ್ ಇರಿಸಿ ಎಸ್ಕೇಪ್
* ಬೆಳಗ್ಗೆ 9.30 – ಸಹ ಪ್ರಯಾಣಿಕರ ಗಮನಕ್ಕೆ ಬಂದ ವಾರಸುದಾರರಿಲ್ಲದ ಬ್ಯಾಗ್
* ಬೆಳಗ್ಗೆ 9.40 – ಏರ್ ಪೋರ್ಟ್ ಭದ್ರತಾ ಸಿಬ್ಬಂದಿಯಿಂದ ಪರಿಶೀಲನೆ, ಪ್ರಯಾಣಿಕರನ್ನು ನಿಲ್ದಾಣದಿಂದ ಖಾಲಿ ಮಾಡಿಸಿದ ಸಿಬ್ಬಂದಿ
* ಬೆಳಗ್ಗೆ 11.00 – ಬಾಂಬ್ ಇದ್ದ ಬ್ಯಾಗ್ ಸ್ಕ್ಯಾನ್ ಮಾಡಿದ ಬಾಂಬ್ ಸ್ಕ್ವಾಡ್
* ಬೆಳಗ್ಗೆ 11.10 – ಬಾಂಬ್ ಪ್ರತಿರೋಧಕ ವಾಹನಕ್ಕೆ ಬಾಂಬ್ ಬ್ಯಾಗ್ ಶಿಫ್ಟ್
* ಮಧ್ಯಾಹ್ನ 2.00 – ಕೆಂಜಾರು ಮೈದಾನದತ್ತ ಬಾಂಬ್ ಪ್ರತಿರೋಧಕ ವಾಹನ
* ಮಧ್ಯಾಹ್ನ 2.40 – ಕೆಂಜಾರು ಮೈದಾನ ತಲುಪಿದ ಬಾಂಬ್ ಪ್ರತಿರೋಧಕ ವಾಹನ
* ಮಧ್ಯಾಹ್ನ 3.30 – ಮರಳಿನ ಚೀಲಗಳ ನಡುವೆ ಬಾಂಬ್ ಇರಿಸಿದ ಬಾಂಬ್ ನಿಷ್ಕ್ರಿಯ ಪಡೆ (12 ಅಡಿ ಆಳದಲ್ಲಿ ಬಾಂಬ್ ಹುದುಗಿಸಿಡಲಾಗಿತ್ತು)
* ಸಂಜೆ 5.35 – ರಿಮೋಟ್ ಮೂಲಕ ಟಿಫನ್ ಕ್ಯಾರಿಯರ್ ನಲ್ಲಿದ್ದ ಐಇಡಿ ಬಾಂಬ್ ಸ್ಫೋಟ


Comments

Leave a Reply

Your email address will not be published. Required fields are marked *