ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

ಮಂಗಳೂರು: ಸ್ಕೇಟಿಂಗ್ ಪಟು ಅನಾಘಾಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ, ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಅತಿಥಿಗಳು ಪ್ರಶಸ್ತಿ ನೀಡಿ ಗೌರವಿಸಿದರು.

ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಸ್ಕೇಟಿಂಗ್ ಪಟು ಅನಘಾ,ತನ್ನ ನಾಲ್ಕನೇ ವಯಸ್ಸಿನಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಆರಂಭಿಸಿದ್ದು ಪ್ರಸ್ತುತ 9 ವರ್ಷ ವಯಸ್ಸಿನಲ್ಲಿ, ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅನಘಾ ಈವರೆಗೆ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 22 ಚಿನ್ನದ ಪದಕ, 9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ. ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ ನ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಯು.ಟಿ.ಖಾದರ್, ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಭೋಜೆಗೌಡ, ಜಿ.ಪಂ.ಅಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ.ಅಧ್ಯಕ್ಷ ಮೋನು, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *