ಮಂಗಳೂರಿನಲ್ಲಿ ಎಲ್ಲಾ ಸಮಾವೇಶಗಳಿಗೆ ಅನುಮತಿ ನಿರಾಕರಿಸಿದ ಪೊಲೀಸ್ ಇಲಾಖೆ

ಮಂಗಳೂರು: ಪೌರತ್ವ ಮಸೂದೆಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆ, ಹಿಂಸಾಚಾರ, ಗೋಲಿಬಾರ್ ಘಟನೆಯ ಕಾವಿನಿಂದ ನಿಧಾನವಾಗಿ ಹೊರ ಬರುತ್ತಿರುವ ಮಂಗಳೂರು ಈಗ ಮತ್ತೊಂದು ಕದನಕ್ಕೆ ಸಿದ್ಧವಾಗುತ್ತಿದೆ.

ಪೌರತ್ವ ಮಸೂದೆ ವಿರೋಧಿಸಿ ಈ ತನಕ ಹೋರಾಟಗಳು ನಡೆಯುತ್ತಿದ್ದರೆ, ಈಗ ಮಸೂದೆ ಪರವಾಗಿ ಸಮಾವೇಶ ನಡೆಸೋಕೆ ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ. ಈ ಪರ – ವಿರೋಧ ಸಮಾವೇಶಗಳು ಮಂಗಳೂರಿನಲ್ಲಿ ಮತ್ತೆ ಶಾಂತಿ ಕದಡುವ ಕಾರಣ ಪೊಲೀಸರು ನಗರ ವ್ಯಾಪ್ತಿಯಲ್ಲಿ ಸಮಾವೇಶಕ್ಕೆ ಅನುಮತಿಯನ್ನೇ ನಿರಾಕರಿಸಿದ್ದಾರೆ.

ಗಲಭೆಯಿಂದ ನಲುಗಿದ ಬಳಿಕ, ನಿಧಾನವಾಗಿ ಸುಧಾರಿಸುತ್ತಿರುವ ರಾಜ್ಯದ ಕಡಲನಗರಿ ಮಂಗಳೂರಿನಲ್ಲಿ ಮತ್ತೆ ಪೌರತ್ವ ಮಸೂದೆ ಕಿಚ್ಚು ಹಚ್ಚಲಿದೆ. ಅದಕ್ಕೆ ಕಾರಣವಾಗಿರುವುದು ಪೌರತ್ವ ಮಸೂದೆ ವಿರೋಧಿ ಮತ್ತು ಪರ ಇರುವ ಬಣಗಳ ಕಾದಾಟ. ಮಸೂದೆ ವಿಚಾರದಲ್ಲಿ ಮಂಗಳೂರು ನಗರದಲ್ಲಿ ದೊಡ್ಡ ಸಮಾವೇಶ ನಡೆಸಲು ಮುಸ್ಲಿಂ ಸಂಘಟನೆಗಳು ಹಾಗೂ ಬಿಜೆಪಿ ತುದಿಗಾಲಿನಲ್ಲಿ ನಿಂತಿದ್ದು, ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದು ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ನಗರದ ಒಳಗೆ ಸಮಾವೇಶ ನಡೆಸುವುದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಇದರಿಂದಾಗಿ ಮುಸ್ಲಿಂ ಸಂಘಟನೆಗಳು ಜನವರಿ 4 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಕೈಗೊಂಡಿದ್ದ ಸಮಾವೇಶ ರದ್ದಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರು ಮುಸ್ಲಿಂ ಸಂಘಟನೆಗಳ ಮನವಿಯನ್ನು ತಿರಸ್ಕರಿಸಿದ್ದು, ನಗರದ ಒಳಗೆ ಬದಲು ಹೊರಗಡೆ ಎಲ್ಲಾದರೂ ಸಮಾವೇಶ ಮಾಡುವಂತೆ ಸೂಚಿಸಿದ್ದಾರೆ.

ಈ ನಡುವೆ ಜನವರಿ 12 ರಂದು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪೌರತ್ವ ಮಸೂದೆ ಪರವಾಗಿ ಬೃಹತ್ ಸಮಾವೇಶ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಆದರೆ ಬಿಜೆಪಿ ಸಮಾವೇಶಕ್ಕೂ ಅನುಮತಿ ನೀಡದಂತೆ ಮುಸ್ಲಿಂ ಸಂಘಟನೆಗಳು ಪೊಲೀಸರಿಗೆ ಮನವಿ ಮಾಡಿದ್ದು ಅನುಮತಿ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಈ ಮಧ್ಯೆ ಮುಸ್ಲಿಂ ಸಂಘಟನೆಗಳ ಒಕ್ಕೂಟ ನೆಹರೂ ಮೈದಾನದಲ್ಲೇ ಸಮಾವೇಶ ನಡೆಸಲು ಅವಕಾಶ ನೀಡುವಂತೆ ಹಠ ಹಿಡಿದಿದೆ. ಪೊಲೀಸರು ಅವಕಾಶ ನೀಡುವವರೆಗೆ ಸಮಾವೇಶ ಮುಂದೂಡೋದಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮಹಮ್ಮದ್ ಮಸೂದ್ ಹೇಳಿದ್ದಾರೆ. ಪರ ವಿರೋಧಿ ಸಮಾವೇಶಗಳ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಗೃಹ ಸಚಿವರ ಗಮನಕ್ಕೂ ತಂದಿದ್ದಾರೆ. ಪರಿಸ್ಥಿತಿ ತಿಳಿಗೊಳ್ಳುವ ತನಕ ಸಮಾವೇಶ ಮುಂದೂಡುವಂತೆ ಎರಡೂ ಕಡೆಗಳ ಮುಖಂಡರಿಗೆ ಕಮಿಷನರ್ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *