‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್: ಅಮ್ಮನಿಗಾಗಿ LLB ಮೊಟಕುಗೊಳಿಸಿದ್ದ ಯುವತಿಗೆ ಸಹಾಯ

ಉಡುಪಿ: ಲಾಕ್ ಡೌನ್‍ನಿಂದಾಗಿ ತಾನು ಅನುಭವಿಸುತ್ತಿರುವ ಕಷ್ಟವನ್ನು ಪಬ್ಲಿಕ್ ಟಿವಿ ಬಳಿ ತೋಡಿಕೊಂಡಿದ್ದ ಉಡುಪಿಯ ಯುವತಿಗೆ ಸಹಾಯ ಹಸ್ತ ದೊರೆತಿದೆ.

ಜಿಲ್ಲೆಯ ಶನಯಾ ಎಂಬ ಯುವತಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುವ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಳು. ಕರೆ ಮಾಡುತ್ತಲೇ ಕಣ್ಣೀರು ಹಾಕಿದ್ದ ಶನಯಾ, ತನ್ನ ಮೂರನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡು ಹುಟ್ಟಿನಿಂದಲೇ ಬಡತನದಿಂದ ಬೆಳೆದಿರುವುದಾಗಿ ತಿಳಿಸಿದ್ದಳು.

ವರ್ಷದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ತನ್ನ ಎಲ್‍ಎಲ್‍ಬಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾಳೆ ಅಂಗಡಿಯೊಂದರಲ್ಲಿ ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದ ಈಕೆಗೆ ಲಾಕ್ ಡೌನ್ ಬಿಸಿತಟ್ಟಿದೆ. ಎರಡು ತಿಂಗಳಿನಿಂದ ಸಂಬಳ ಸಿಗದೇ ಕುಟುಂಬ ಕಂಗೆಟ್ಟಿತ್ತು.

 ಇದೀಗ ಪಬ್ಲಿಕ್ ಟಿವಿ ಮೊರೆ ಹೋಗಿದ್ದನ್ನು ಕಂಡ ಉಡುಪಿಯ ನಾಗೇಂದ್ರ ಕಾಮತ್, ಐದು ಸಾವಿರ ರೂಪಾಯಿ ನೀಡಿ ಕುಟುಂಬದ ಸಾಲದ ಹೊರೆಯನ್ನು ಇಳಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಅದಮಾರು ಮಠ ಸುಮಾರು ಒಂದು ತಿಂಗಳಿಗೆ ಆಗುವಷ್ಟು ದಿನಸಿ ವಸ್ತುಗಳನ್ನು ಪೂರೈಸಿದೆ. ಮುಂದೆ ಆಕೆ ವಿದ್ಯಾಭ್ಯಾಸ ಮಾಡುವುದಾದರೆ ಮೂರೂ ವರ್ಷ ಸಹಾಯ ಮಾಡುವುದಾಗಿ ಅದಮಾರು ಮಠದವರು ಭರವಸೆ ಕೊಟ್ಟಿದ್ದಾರೆ.

ಯುವತಿ ಮತ್ತು ಆಕೆಯ ತಾಯಿ ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ. ರಾಜ್ಯ ಮತ್ತು ಹೊರ ದೇಶದಿಂದ ಪಬ್ಲಿಕ್ ಟಿವಿಗೆ ಹತ್ತಾರು ಕರೆಗಳು ಬಂದಿದ್ದು ಯುವತಿಗೆ ಆರ್ಥಿಕ, ಶೈಕ್ಷಣಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ್ದ ಶನಯಾ, ತನ್ನ ಕಷ್ಟ ತೀರಿದ ನಂತರ ತನಗೊಂದು ಉದ್ಯೋಗ ಸಿಕ್ಕ ನಂತರ ನನ್ನ ಸುತ್ತಮುತ್ತಲೇ ಯಲ್ಲಿ ಯಾರೇ ಕಷ್ಟದಲ್ಲಿದ್ದರೂ ಅವರಿಗೆ ನನ್ನ ಕೈಲಾಗುವ ಸಹಾಯ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *