ಮಂಡ್ಯದ ಎಸ್ಪಿ ಕಚೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಅಸಲಿ ಡ್ರಾಮ ಬಯಲು!

ಮಂಡ್ಯ: ಇತ್ತೀಚೆಗೆ ನ್ಯಾಯ ಸಿಗುತ್ತಿಲ್ಲ, ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮಂಡ್ಯ ಎಸ್ಪಿ ಕಚೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ನಿಜ ರೂಪ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಡ್ಯದ ಹಲ್ಲೆಗೆರೆ ಗ್ರಾಮದ ಜಯಮ್ಮ(60) ವಿಷ ಕುಡಿದ ರೀತಿ ನಾಟಕವಾಡಿ ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಈಕೆ ಮಾರ್ಚ್ 29 ರಂದು ಮಂಡ್ಯದ ಎಸ್ಪಿ ಕಚೇರಿಗೆ ಆಗಮಿಸಿದ್ದಳು. ಈ ಸಂದರ್ಭ ಕಚೇರಿಯ ಮೈನ್ ಡೋರ್ ಬಳಿ ಯಾರು ಇಲ್ಲದ್ದನ್ನು ಗಮನಿಸಿ ತನ್ನ ಮೈಮೇಲೆ ವಿಷ ಚೆಲ್ಲಿಕೊಂಡು ಅದನ್ನು ಕುಡಿದ ರೀತಿ ಕೆಳಗೆ ಬಿದ್ದು ನಾಟಕವಾಡಿದ್ದಳು.

ಬಳಿಕ ಈಕೆಯ ಮಗ ಮಾಧ್ಯಮಗಳಿಗೆ ಕರೆ ಮಾಡಿ, ನಮಗೆ ಜಮೀನು ವಿಚಾರವಾಗಿ ನ್ಯಾಯ ಸಿಕ್ಕಿಲ್ಲ. ಪೊಲೀಸರು ಕೂಡ ನಮಗೆ ಸ್ಪಂದಿಸುತ್ತಿಲ್ಲ ಹೀಗಾಗಿ ನಮ್ಮ ತಾಯಿ ಎಸ್ಪಿ ಕಚೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಯೊಂದನ್ನು ನೀಡಿದ್ದನು. ಬಳಿಕ ಜಯಮ್ಮಳನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ಈ ಸಂದರ್ಭ ವೈದ್ಯರು ಜಯಮ್ಮ ವಿಷ ಕುಡಿದಿಲ್ಲ ಅನ್ನೋ ಮಾಹಿತಿಯನ್ನ ಪೊಲೀಸರಿಗೆ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಕಚೇರಿಯ ಸಿಸಿಟಿವಿ ಪರೀಕ್ಷಿಸಿದಾಗ ಜಯಮ್ಮಳ ಅಸಲಿ ಡ್ರಾಮ ಗೊತ್ತಾಗಿದೆ. ಇನ್ನು ಈ ದೃಶ್ಯವನ್ನ ನೋಡಿದ ಪೊಲೀಸರು ಜಯಮ್ಮಳ ಡ್ರಾಮಾ ಕಂಡು ದಂಗಾಗಿದ್ದಾರೆ.

Comments

Leave a Reply

Your email address will not be published. Required fields are marked *