– ಹೆಚ್‍ಡಿಕೆಯನ್ನು ಸಿಎಂ ಮಾಡಿದ್ದು ಬಿಎಸ್‍ವೈ
ಮಂಡ್ಯ: ಜೆಡಿಎಸ್ ಪಕ್ಷಕ್ಕೆ ಒಕ್ಕಲಿಗ ಸಮಾಜ ಕೇವಲ ವೋಟ್ ಬ್ಯಾಂಕ್ ಆಗಿದೆ ಎಂದು ಸಿಎಂ ಯಡಿಯೂರಪ್ಪ ಅವರು ಪುತ್ರ ವಿಜಯೇಂದ್ರ ಕಿಡಿಕಾರಿದ್ದಾರೆ.
ಕೆಆರ್ ಪೇಟೆಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ಜೆಡಿಎಸ್ ರಾಜಕೀಯ ಮಾಡಿದೆ. ಜೆಡಿಎಸ್‍ಗೆ ಅಧಿಕಾರ ಸಿಕ್ಕರೂ ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಲಿಲ್ಲ ಎಂದು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಯಡಿಯೂರಪ್ಪ ಅವರನ್ನು ಒಕ್ಕಲಿಗ ವಿರೋಧಿ ಎನ್ನುತ್ತಾರೆ. ಆದರೆ ಒಕ್ಕಲಿಗ ನಾಯಕರು ಎನಿಸಿಕೊಂಡಿರುವ ಕುಮಾರಸ್ವಾಮಿ ಮತ್ತು ಸದಾನಂದಗೌಡರನ್ನು ಸಿಎಂ ಮಾಡಿದ್ದೆ ಯಡಿಯೂರಪ್ಪನವರು. ಯಡಿಯೂರಪ್ಪನವರನ್ನು ಎಲ್ಲಾ ಸಮುದಾಯದವರು ಒಪ್ಪಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ನಿರ್ನಾಮವಾಗಿದೆ. ಈಗ ಬೆರಳೆಣಿಕೆಯ ಶಾಸಕರಷ್ಟೇ ಜೆಡಿಎಸ್‍ನಲ್ಲಿದ್ದಾರೆ. ಅವರು ಕೂಡ ಯಾವತ್ತು ಜೆಡಿಎಸ್ ಬಿಟ್ಟು ಓಡಿಹೋಗ್ತಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಕಾಲೆಳೆದರು.

ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗಿ ತಮ್ಮ ಮಗನನ್ನ ಗೆಲ್ಲಿಸಿಕೊಳ್ಳಲಾಗಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಮದದಿಂದ ಮಂಡ್ಯ ಗೆಲ್ಲುತ್ತೆವೆ ಎನ್ನುತ್ತಿದ್ದರು. ರಾಜ್ಯದಲ್ಲಿ ಎಲ್ಲಾದರು ಪ್ರಜ್ಞಾವಂತ ಮತದಾರರು ಇದ್ದರೆ ಅದು ಮಂಡ್ಯದಲ್ಲಿ ಅನ್ನೋದು ಸಾಬೀತಾಗಿದೆ. ಅಧಿಕಾರದ ಮದದಲ್ಲಿದ್ದವರಿಗೆ ಸರಿಯಾದ ಪಾಠವನ್ನೇ ಮಂಡ್ಯ ಜನ ಕಲಿಸಿದ್ದಾರೆ. ಒಬ್ಬ ಹೆಣ್ಣುಮಗಳ ವಿರುದ್ಧ ಬಾಯಿಗೆ ಬಂದಹಾಗೇ ಮಾತನಾಡಿದರು. ಹೆಣ್ಣಿಗೆ ಗೌರವ ಕೊಡಬೇಕು ಎಂಬ ಕನಿಷ್ಠ ಸೌಜನ್ಯವೂ ಅಂದಿನ ಮುಖ್ಯಮಂತ್ರಿಗೆ ಇರಲಿಲ್ಲ ಎಂದು ಹೆಚ್‍ಡಿಕೆ ವಿರುದ್ಧ ಕಿಡಿಕಾರಿದರು.

Leave a Reply