ಕರ್ತವ್ಯಲೋಪ ಎಸಗಿದ ಪಿಎಸ್‍ಐಯನ್ನು ಸಸ್ಪೆಂಡ್ ಮಾಡಿದ ಎಸ್‍ಪಿ

ಮಂಡ್ಯ: ಶಿಂಷಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ದಂಧೆ ಹಾಗೂ ಸಾಗಾಣಿಕೆಯನ್ನು ನಿಯಂತ್ರಿಸುವಲ್ಲಿ ಕೆಸ್ತೂರು ಪೊಲೀಸ್ ಠಾಣಾ ಪಿಎಸ್‍ಐ ಪ್ರಭಾ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅಮಾನತ್ತು ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.

ಫೆಬ್ರವರಿ 4ರಂದು ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲನ ಕುಪ್ಪೆ ಗ್ರಾಮದ ತುಮಕೂರು- ಮದ್ದೂರು ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದು ಮೂವರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದರು. ಅಪಘಾತವಾದ ತಕ್ಷಣವೇ ಲಾರಿಯಲ್ಲಿದ್ದ ಮರಳನ್ನು ದಂಧೆಕೋರರು ಹೆದ್ದಾರಿ ಪಕ್ಕದ ಜಮೀನಿನಲ್ಲಿ ಸುರಿದು ಮರಳು ಸಾಗಾಣಿಕೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ.

ಪಿಎಸ್‍ಐ ಪ್ರಭಾ

ಲಾರಿ ಮಾಲೀಕರೊಂದಿಗೆ ಪಿಎಸ್‍ಐ ಪ್ರಭಾ ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಎಸ್‍ಪಿ ಕೆ. ಪರಶುರಾಮ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂಬಂಧ ಪಿಎಸ್‍ಐ ಪ್ರಭಾ ಅವರನ್ನು ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಎಂದು ಎಸ್‍ಪಿ ಆದೇಶ ಹೊರಡಿಸಿದ್ದಾರೆ.

Comments

Leave a Reply

Your email address will not be published. Required fields are marked *