ಮುಂಜಾನೆ ವಾಕ್ ಮಾಡುವಂತೆ ಹೇಳಿದ ನರ್ಸ್- ಕುಸಿದು ಬಿದ್ದು ಗರ್ಭಿಣಿ ಸಾವು

– ಮಗು ಪಾರು
– ವೈದ್ಯರ ವಿರುದ್ಧ ಪೋಷಕರು ಆಕ್ರೋಶ

ಮಂಡ್ಯ: ಹೆರಿಗೆ ಸಂದರ್ಭದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಡ್ಯದ ಆಶ್ರಯ ನರ್ಸಿಂಗ್ ಹೋಮ್ ನಲ್ಲಿ ನಡೆದಿದೆ.

ಸುಶೀಲಾ (32) ಸಾವನ್ನಪ್ಪಿದ ಮಹಿಳೆ. ಈಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದ ನಿವಾಸಿ. ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಮೃತಪಟ್ಟಿರುವುದಾಗಿ ಆಕೆಯ ಪೋಷಕರು ಆರೋಪ ಮಾಡುತ್ತಿದ್ದು, ಪ್ರತಿಭಟನೆ ನಡೆಸಿದ್ದಾರೆ.

ಗುರುವಾರ ಸುಶೀಲಾರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾನೆ 3 ಗಂಟೆ ಸುಮಾರಿಗೆ ನರ್ಸ್ ಗಳು ಗರ್ಭಿಣಿಗೆ ವಾಕ್ ಮಾಡಲು ಹೇಳಿದ್ದಾರೆ. ಗರ್ಭಿಣಿ ಜೊತೆಗೆ ನರ್ಸ್ ಬಾರದೇ ಒಬ್ಬರನ್ನೇ ವಾಕ್ ಮಾಡಲು ಬಿಟ್ಟಿದ್ದಾರೆ. ಈ ವೇಳೆ ಮಹಿಳೆ ಕುಸಿದು ಬಿದ್ದು ತೀವ್ರ ರಕ್ತಸ್ರಾವವಾಗಿದೆ.

ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದಿದ್ದರಿಂದ ನರ್ಸ್ ಗಳೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ತಡವಾಗಿ ಆಸ್ಪತ್ರೆಗೆ ಬಂದ ವೈದ್ಯೆ ಡಾ. ಶರ್ಮಿಳಾ, ಮಗು ಬದುಕಿದೆ. ಹೈ ಬೀಪಿ, ರಕ್ತ ಸ್ರಾವದಿಂದ ಮಹಿಳೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮೃತ ಮಹಿಳೆಯ ಫೋಷಕರು, ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ವೈದ್ಯರು, ನರ್ಸ್ ಗಳ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವನ್ನಪ್ಪಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಮಂಡ್ಯ ಎಸ್ಪಿ ಪರಶುರಾಮ್ ಭೇಟಿ ನೀಡಿದ್ದಾರೆ. ಮಂಡ್ಯ ಪಶ್ಚಿಮ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *