ಉಡುಪಿ: ಮಂಡ್ಯ ಪೊಲೀಸರು ಹಾಸನದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಿಗೆ ಪಿಸ್ತೂಲ್ ತಲೆಗಿಟ್ಟು ಹಲ್ಲೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಮರಾವತಿ ಹೋಟೆಲ್‍ನಲ್ಲಿ ಹಾಸನದ ಕರವೇ ಕಾರ್ಯಕರ್ತರು ತಿಂಡಿಗೆಂದು ಬಂದಿದ್ದರು. ಈ ಸಂದರ್ಭದಲ್ಲಿ ಮಂಡ್ಯದಿಂದ ಬಂದ ಸುಮಾರು 15 ಮಂದಿ ಪೊಲೀಸರು ಹಾಸನದ ಕರವೇ ಅಧ್ಯಕ್ಷ ಸತೀಶ್ ಪಾಟೀಲ್ ತಲೆಗೆ ಪಿಸ್ತೂಲ್ ಹಿಡಿದು ಹಲ್ಲೆ ನಡೆಸಿದರು.
ಕೇರಳ ರಾಜ್ಯ ಸರ್ಕಾರ ಮಲಯಾಳಂ ಭಾಷೆ ಕಡ್ಡಾಯ ಮಾಡಿದ್ದ ಹಿನ್ನೆಲೆಯಲ್ಲಿ ಕರವೇ ಇಂದು ಉಡುಪಿಯಿಂದ ಕಾಸರಗೋಡು ಚಲೋ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಅದಕ್ಕಾಗಿ ರಾಜ್ಯದ ಹಲವು ಭಾಗದ ಕರವೇ ಕಾರ್ಯಕರ್ತರು ಉಡುಪಿಗೆ ಬಂದಿದ್ದರು. ಹಾಸನದಿಂದ ಬಂದ ಕರವೇ ಕಾರ್ಯಕರ್ತರು ಉಡುಪಿಯ ಗಡಿ ಭಾಗ ಹೆಬ್ರಿಯ ಅಮರಾವತಿ ಹೋಟೆಲ್‍ನಲ್ಲಿ ತಂಗಿದ್ದರು.
ಬೆಳಗ್ಗೆ ನಿದ್ದೆಯಿಂದ ಎದ್ದು ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಜೀಪುಗಳಲ್ಲಿ ಬಂದ ಪೊಲೀಸರು ಸತೀಶ್ ಪಾಟೀಲ್ ಗೆ ಎರಡೇಟು ಬಿಗಿದು ಪಿಸ್ತೂಲನ್ನು ತಲೆಗೆ ಇಟ್ಟಿದ್ದಾರೆ. ಏನು ನಡೆಯುತ್ತಿದೆ ಎಂದು ಗೊತ್ತಾಗದ ಕರವೇ ಕಾರ್ಯಕರ್ತರು ಪೊಲೀಸರನ್ನು ವಿಚಾರಿಸಿದ್ದಾರೆ. ಈ ಸಂದರ್ಭ ಜೊತೆಯಲ್ಲಿದ್ದವರಿಗೂ ಪೊಲೀಸರು ಥಳಿಸಿದ್ದಾರೆ. ಒಂದೆರಡು ನಿಮಿಷ ಕಳೆಯುತ್ತಿದ್ದಂತೆ ಸತ್ಯ ಬಹಿರಂಗವಾಗಿದೆ.

ಆರೋಪಿಯೆಂದು ತಪ್ಪು ತಿಳಿದ ಪೊಲೀಸರು: ಮಂಡ್ಯ ಪೊಲೀಸರು ಯಾವುದೋ ಒಂದು ಪ್ರಕರಣ ಸಂಬಂಧ ಆರೋಪಿಗಳನ್ನು ಹುಡುಕಿಕೊಂಡು ಉಡುಪಿಗೆ ಬಂದಿದ್ದರು. ಪೊಲೀಸರಿಗೆ ಆರೋಪಿಯ ಲೊಕೇಶನ್ ಹೆಬ್ರಿ ಆಸುಪಾಸಿನಲ್ಲಿ ಕಾಣಿಸಿಕೊಂಡಿತ್ತು. ಸತೀಶ್ ಆರೋಪಿಯಂತೆ ಕಂಡ. ನೋಡಿದವರೇ ಪರಾರಿಯಾಗುವ ಮೊದಲು ಹಿಡಿಯೋಣ ಎಂದು ಮಂಡ್ಯ ಪೊಲೀಸರು ತಲೆಗೆ ಪಿಸ್ತೂಲ್ ಇಟ್ಟಿದ್ದಾರೆ. ಕರವೇ ಹಾಸನ ಜಿಲ್ಲಾಧ್ಯಕ್ಷನನ್ನು ಆರೋಪಿ ಎಂದು ತಪ್ಪಾಗಿ ಭಾವಿಸಿ ಇಷ್ಟೆಲ್ಲಾ ಎಡವಟ್ಟು ಮಾಡಿದ್ದಾರೆ.
ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಗೊತ್ತಾದ ಕೂಡಲೇ ಕರವೇ ಕಾರ್ಯಕರ್ತರು ಪೊಲೀಸರ ಮೇಲೆ ಮುಗಿಬಿದ್ದರು. ಅನ್ಯಾಯವಾಯ್ತು.., ಪೊಲೀಸರು ದೌರ್ಜನ್ಯ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೆಬ್ರಿ ಅಮರಾವತಿ ಹೋಟೆಲ್‍ನಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯ್ತು. ಕರವೇ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದರು. ಮಂಡ್ಯ ಪೊಲೀಸರು ಮತ್ತು ಹಾಸನ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸ್ಥಳಕ್ಕಾಗಮಿಸಿ ಪೊಲೀಸರು ಮತ್ತು ಕಾರ್ಯಕರ್ತರ ಜಗಳ ಬಿಡಿಸಿದರು. ಮಂಡ್ಯ ಪೊಲೀಸರು ನಮ್ಮದು ತಪ್ಪಾಗಿದೆ ಎಂದು ಕ್ಷಮೆ ಯಾಚಿಸಿದ ಮೇಲೆ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಯ್ತ 
ಕಾಸರಗೋಡು ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರವೇ ಪ್ರವೀಣ್ ಶೆಟ್ಟಿ ಬಣ ಉಡುಪಿಗೆ ಬಂದಿತ್ತು. ಹಾಸನ- ಚಿಕ್ಕಮಗಳೂರು- ಕಾರವಾರ ಸೇರಿದಂತೆ ಹತ್ತಿರದ ಜಿಲ್ಲೆಗಳಿಂದ ಜನ ಉಡುಪಿಗೆ ಬಂದಿದ್ದರು. ಪೊಲೀಸರು ಕ್ಷಮೆ ಕೇಳಿದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ರೆ ಪೊಲೀಸರು ಕರ್ತವ್ಯದಲ್ಲಿದ್ದಾಗ ಪ್ರಜ್ಞೆಯನ್ನು ಇಟ್ಟುಕೊಳ್ಳಬೇಕು. ಅಮಾಯಕರ ಮೇಲೆ ಹಲ್ಲೆಯನ್ನು ಮಾಡಬಾರದು. ಈ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಪ್ರವೀಣ್ ಶೆಟ್ಟಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಗೆಳೆಯರ ಜೊತೆ ಟಿ ಕುಡಿಯುತ್ತಿದ್ದೆ, ನನಗೆ ಏನಾಗ್ತಿದೆ ಅಂತ ಗೊತ್ತಾಗಿಲ್ಲ. ಪಿಸ್ತೂಲು ಕಣ್ಣಮುಂದೆ ಬಂದಾಗ ಜೀವಭಯವಾಯ್ತು. ಯಾರು ಏನು ಮಾಡುತ್ತಿದ್ದಾರೆ ಎಂದೂ ತಿಳಿಯಲಿಲ್ಲ. ಮಫ್ತಿಯಲ್ಲಿದ್ದದ್ದರಿಂದ ನನಗೆ ಬಂದವರು ಪೊಲೀಸರು ಅಂತನೂ ಗೊತ್ತಾಗಲಿಲ್ಲ. ಯಾರೋ ಆಗಂತುಕರು ಬಂದು ದಾಳಿ ನಡೆಸುತ್ತಿದ್ದಾರೆ ಎಂದು ಭಾವಿಸಿದೆ ಅಂತ ಸತೀಶ್ ಪಾಟೀಲ್ ಪಬ್ಲಿಕ್ ಟಿವಿ ಜೊತೆ ಆತಂಕದಿಂದಲೇ ಮಾತನಾಡಿದರು.





Leave a Reply